ಕುಂದಾಪುರ ಎಂ.ಐ.ಟಿ.ಯಲ್ಲಿ 17ನೇ ಘಟಿಕೋತ್ಸವ ಸಂಪನ್ನ

| Published : Sep 12 2024, 01:48 AM IST

ಸಾರಾಂಶ

ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂ.ಐ.ಟಿ.)ಯ 17ನೇ ಬ್ಯಾಚ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂ.ಐ.ಟಿ.)ಯ 17ನೇ ಬ್ಯಾಚ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲದ ಮಿರಾಫ್ರ ಟೆಕ್ನಾಲಜೀಸ್ ಉಪಾಧ್ಯಕ್ಷ ವಿನೋದ್, ಘಟಿಕೋತ್ಸವ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಗುರಿಗಳನ್ನು ಹೊಂದಲು ಸಲಹೆ ನೀಡಿದರು ಮತ್ತು ಪ್ರಾಮಾಣಿಕತೆ, ವಿನಮ್ರತೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿ ಒರ್ಡ್ರಿಯೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸುಮಂತ್ ಶೆಟ್ಟಿ ಮಾತನಾಡಿ, ಪದವೀಧರರು ತಮ್ಮ ಗುರಿಗಳನ್ನು ತಲುಪಲು ಇನ್ನೂ ಕೆಲವು ವರ್ಷಗಳ ವರೆಗೆ ಕಲಿಯಬೇಕು ಎಂದರಲ್ಲದೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಂ.ಐ.ಟಿ.ಯ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಅತಿಥಿಗಳು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ವಿವಿಧ ವಿಭಾಗಗಳಲ್ಲಿ ಉನ್ನತ ಅಂಕ ಪಡೆದವರಿಗೆ ಪದಕಗಳನ್ನು ವಿತರಿಸಿದರು.ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶ್ರಮವಹಿಸಿ ದುಡಿದು ತಮ್ಮ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿ ತರುವಂತೆ ತಿಳಿಸಿದರು. ದೂರದೃಷ್ಟಿಯುಳ್ಳ, ಸ್ಥಾಪಕ ಅಧ್ಯಕ್ಷ, ದಿ. ಐ.ಎಂ. ಜಯರಾಮ ಶೆಟ್ಟಿ ಮತ್ತು ಪ್ರಸ್ತುತ ಅಧ್ಯಕ್ಷ ಸಿದ್ದಾರ್ಥ ಜೆ. ಶೆಟ್ಟಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡಲು ಅದ್ಭುತ ಅವಕಾಶ ಒದಗಿಸಿದ್ದಕ್ಕೆ ಶ್ಲಾಘಿಸಿದರು.ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ, ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಐ.ಎಂ.ಜೆ. ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಕಾರ್ಯಕ್ರಮ ಸಂಯೋಜಕರಾದ ಪ್ಲೇಸ್ಮೆಂಟ್ ಡೀನ್ ಪ್ರೊ.ಅಮೃತಮಾಲ, ಎಲ್ಲ ವಿಭಾಗ ಮುಖ್ಯಸ್ಥರು, ಪದವೀಧರರು ಮತ್ತು ಅವರ ಪೋಷಕರು ಈ ಸಂದರ್ಭ ಉಪಸ್ಥಿತರಿದ್ದರು.ಪ್ರೊ. ಫರಾನಾ ಸಮಾರಂಭ ನಡೆಸಿಕೊಟ್ಟರು. ಪ್ರಾಧ್ಯಾಪಕಿ ಶ್ರೀನಿಧಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ತಿಲಕಲಕ್ಷ್ಮೀ ಸ್ವಾಗತಿಸಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.