ಸಾರಾಂಶ
- ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಕಾರ್ಯಕ್ರಮ । ಮಠಾಧೀಶರು, ರಾಜಕೀಯ ಗಣ್ಯರು ಭಾಗಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಬಸವತತ್ವದ ಮಹಾ ಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಶ್ರೀ ಸಂಗಮನಾಥ ಮಹಾಸ್ವಾಮೀಜಿ ಅವರ 63ನೇ ವರ್ಷದ ಸ್ಮರಣೋತ್ಸವ, ಲಿಂಗೈಕ್ಯ ಶ್ರೀ ಚನ್ನಬಸವ ಮಹಾಸ್ವಾಮೀಜಿ ಅವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನ ಜ.17ರಿಂದ 19ರವರೆಗೆ ಶ್ರೀ ಮಠದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಡಾ.ಗುರುಬಸವ ಮಹಾಸ್ವಾಮೀಜಿ ತಿಳಿಸಿದ್ದಾರೆ.ಸ್ಮರಣೋತ್ಸವ ನಿಮಿತ್ತ ಜ.17ರ ಬೆಳಗ್ಗೆ 10.30ರಿಂದ ಬೆಂಗಳೂರಿನ ಸಪ್ತಗಿರಿ ಆಸ್ಫತ್ರೆಯ ತಜ್ಞ ವೈದ್ಯರಿಂದ ನರರೋಗ, ಬೆನ್ನುನೋವು, ಕಿವಿ, ಮೂಗು, ಗಂಟಲು, ಮೂಳೆ ಮತ್ತು ಕೀಲುರೋಗ, ಬಿ.ಪಿ. ಮತ್ತು ಸಕ್ಕರೆ ಕಾಯಿಲೆ ವಿಭಾಗ, ಮೂತ್ರಪಿಂಡದ ತೊಂದರೆ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಇಸಿಜಿ ಮತ್ತು ಮಕ್ಕಳ ವಿಭಾಗಗಳ ತಜ್ಞ ವೈದ್ಯರು ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ನಡೆಸಲಿದ್ದಾರೆ.
18ರ ಶನಿವಾರ ಬೆಳಗ್ಗೆ 8 ಗಂಟೆಗೆ ಷಟ್ಸ್ಥಲ ಧ್ವಜಾರೋಹಣವನ್ನು ಗೌಡರ ಸಿದ್ದರಾಮಪ್ಪ ನೆರವೇರಿಸುವರು, 8.30ಕ್ಕೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಡಾ.ಗುರುಬಸವ ಮಹಾಸ್ವಾಮೀಜಿ, ಎನ್.ಆರ್.ಪುರದ ಶ್ರೀ ಬಸವಯೋಗಿ ಸ್ವಾಮೀಜಿ ವಹಿಸುವರು. ಆ ದಿನ ಬೆಳಗ್ಗೆ 11 ಗಂಟೆಗೆ ರೈತ ಸಂಗಮ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆ ಪಾಂಡೋಮಟ್ಟಿ ಶ್ರೀಗಳು ವಹಿಸುವರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಟಿ,ನರಸೀಪುರದ ಗೌರಿಶಂಕರ ಮಹಾಸ್ವಾಮೀಜಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಚಾಮರಾಜನಗರದ ಅಂತರ ರಾಷ್ಟ್ರೀಯ ರೈತ ಸಂಘಟಕ ಚುಕ್ಕಿ ನಂಜುಂಡಸ್ವಾಮಿ ನೆರವೇರಿಸುವರು.ರೈತ ಸಂಘದ ವಿಚಾರವಾಗಿ ನೀರಿನ ಸದ್ಬಳಕೆ, ಮಳೆಯಾದಾರಿತ ಬೆಳೆಗಳು, ನೈಸರ್ಗಿಕ ಕೃಷಿಗಳು, ಆಹಾರ ಮತ್ತು ಆರೋಗ್ಯ ಮುಂತಾದ ವಿಷಯಗಳ ಕುರಿತಂತೆ ತಜ್ಞರಾದ ಚಿತ್ರದುರ್ಗದ ದೇವರಾಜ ರೆಡ್ಡಿ, ಕೂಡ್ಲಿಗೆಯ ಎಚ್.ವಿ. ಸಜ್ಜನ್. ಚಿಕ್ಕಮಗಳೂರಿನ ಚಂದ್ರಶೇಖರ ನಾರಾಯಣಪುರ, ಅಮೆರಿಕಾದ ಡಾ.ವಿಶ್ವನಾಥ್ ಅವರು ವಿಷಯ ಮಂಡನೆ ಮಾಡುವರು.
ಮುಖ್ಯ ಅತಿಥಿಗಳಾಗಿ ದಾವಣಗೆರೆಯ ಸಹಕಾರ ರತ್ನ ಪುರಸ್ಕೃತ ಷಣ್ಮುಖಪ್ಪ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಭಾಗವಹಿಸುವರು. ಮಧ್ಯಾಹ್ನ 3.15ಕ್ಕೆ ಧರ್ಮಸಂಗಮ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಮಠಾಧೀಶರು ಭಾಗವಹಿಸುವರು. ಸಂಜೆ 6.30ಕ್ಕೆ ನಾಡಿನ ವಿವಿಧ ಮಠಾಧೀಶರ ಸಮ್ಮುಖ ಶರಣ ಸಂಗಮ ಸಮಾರಂಭವನ್ನು ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶರಣರಲ್ಲಿ ದೇವರ ಕಲ್ಫನೆ ವಿಷಯವಾಗಿ ಉಪನ್ಯಾಸ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವಿ.ಪ. ಸದಸ್ಯ ಡಾ.ಧನಂಜಯ ಸರ್ಜಿ, ಹಿರೇಕೆರೂರು ಶಾಸಕ ಬಣಕಾರ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್ ಭಾಗವಹಿಸುವರು.
ಜ.19ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಬಸವ ತತ್ವ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಪಾಂಡೋಮಟ್ಟಿ ಶ್ರೀಗಳು ವಹಿಸಲಿದ್ದು, ನೇತೃತ್ವವನ್ನು ಸಾಳೇಹಣ್ಣಿ ಶ್ರೀಮಠದ ಪಟ್ಟಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ದಿವ್ಯ ಸಾನಿಧ್ಯವನ್ನು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಸಿದ್ದಯ್ಯನ ಕೋಟೆಯ ಬವಸಲಿಂಗ ಮಹಾಸ್ವಾಮಿಗಳು ವಹಿಸುವರು.ಸಮಾರಂಭದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೆರವೇರಿಸುವರು. ಚಳ್ಳಕೆರೆಯ ತತ್ವ ಚಿಂತಕ ಶಬ್ರಿನಾ ಮಹಮದ್ ಆಲಿ ಪಾಲ್ಗೊಳ್ಳುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಶಿವಗಂಗಾ, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಬೆಂಗಳೂರಿನ ಬಿಡಿಎ ಅಧ್ಯಕ್ಷ ಹ್ಯಾರಿಸ್, ವಿ.ಪ. ಸದಸ್ಯರಾದ ನಾಗರಾಜ ಯಾದವ್, ಸಿ.ಪುಟ್ಟಣ್ಣ, ರುದ್ರೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ಅನುಮಲಿ ಷಣ್ಮುಖಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಡಿ.ಎಸ್. ಪ್ರವೀಣ್, ಮಾಡಾಳು ಮಲ್ಲಿಕಾರ್ಜುನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
- - - (ಸಾಂದರ್ಭಿಕ ಚಿತ್ರ)