ಜಿಲ್ಲೆಯಲ್ಲಿ 18,017 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭಾಗಿ

| Published : Mar 21 2025, 12:34 AM IST

ಸಾರಾಂಶ

18,017 students appeared for the SSLC exam in the district

-ಜಿಲ್ಲಾಧಿಕಾರಿ ಡಾ. ಸುಶೀಲಾ ಮಾಹಿತಿ । ಡಿಡಿಪಿಐ ಚೆನ್ನಬಸಪ್ಪ ಮುಧೋಳ ಭೇಟಿ । ವೆಬ್‌ಕಾಸ್ಟಿಂಗ್‌, ಸಿಸಿಟಿವಿ ಸೌಲಭ್ಯ ಪರಿಶೀಲನೆ

------

ಕನ್ನಡಪ್ರಭ ವಾರ್ತೆ ಯಾದಗಿರಿ

2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ - 1 ಮಾ.21 ರಿಂದ ಆರಂಭಗೊಳ್ಳುತ್ತಿದ್ದು, ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದರು.

ಜಿಲ್ಲೆಯಲ್ಲಿ ಪರೀಕ್ಷೆಗಾಗಿ ಒಟ್ಟು 62 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಶಹಾಪೂರ ತಾಲೂಕಿನಲ್ಲಿ 21, ಸುರಪುರ ತಾಲೂಕಿನಲ್ಲಿ19 ಹಾಗೂ ಯಾದಗಿರಿ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 18,017 ವಿದ್ಯಾರ್ಥಿಗಳು ಪರೀಕ್ಷೆ ಗೆ ನೋಂದಣಿಯಾಗಿದ್ದು, ಈ ಪೈಕಿ ಸಿಸಿಆರ್ ಎಫ್- 15,883 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು, 350ಕ್ಕಿಂತಲೂ ಹೆಚ್ಚಿನ ನೋಂದಣಿಯಿರುವ ಪರೀಕ್ಷೆ ಕೇಂದ್ರಗಳಿಗೆ ಒರ್ವ ಉಪ ಅಧೀಕ್ಷಕ ರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 9 ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿದ್ದು, ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷೆ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಲು ಹಾಗೂ ವೆಬ್ ಕಾಸ್ಟಿಂಗ್ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಮಟ್ಟದ ಜಾಗೃತ ದಳವನ್ನು ರಚಿಸಲಾಗಿದೆ. ಸುಸೂತ್ರ ಪರೀಕ್ಷೆಗೆ ಪೊಲೀಸ್‌ ಇಲಾಖೆ, ಖಜಾನೆ ಇಲಾಖೆ, ಆರೋಗ್ಯ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಸಹಕಾರಕ್ಕೆ ಸೂಚಿಸಲಾಗಿದೆ.

ಪರೀಕ್ಷೆ ಕೇಂದ್ರಗಳ ಸ್ವಚ್ಛತೆ, ಕುಡಿವ ನೀರು, ಶೌಚಾಲಯ ಸೌಲಭ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ.ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷಾ ಮಾರ್ಗಸೂಚಿಯಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ಪರೀಕ್ಷಾ ಕೇಂದ್ರಗಳ ಸುತ್ತಲೂ ಈಗಾಗಲೇ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಡಾ. ಸುಶೀಲಾ ಹೇಳಿದರು.

ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಫಲಿತಾಂಶವನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಗೈರು ಹಾಜರಿಗೆ ಕ್ರಮ: ನಿಧಾನಗತಿ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ಅವರನ್ನು ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಸಂಯೋಜಿಸುವುದು, ಎಸ್.ಡಿ.ಎಂ.ಸಿ ಹಾಗೂ ಇನ್ನಿತರ ಭಾಗಿದಾರರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರಲು ಗೈರು ಹಾಜರಿ ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ.

ನನ್ನ ಚಿತ್ರ ನನ್ನ ಪೋಸ್ಟ್: ಪಠ್ಯ ಪುಸ್ತಕದಲ್ಲಿನ ವಿಜ್ಞಾನ ಚಿತ್ರಗಳನ್ನು ರಂಗೋಲಿ ಮೂಲಕ ಪ್ರದರ್ಶನ ಏರ್ಪಡಿಸಿ ಕಲಿಕಾ ವಾತಾವರಣ ಸೃಷ್ಠಿಸಲಾಗಿದೆ. ಎಸ್.ಎಸ್.ಎಲ್.ಸಿ ಮಕ್ಕಳನ್ನು ಶನಿವಾರ ಹಾಗೂ ಭಾನುವಾರ ವಿಶೇಷ ತರಗತಿ ಏರ್ಪಡಿಸಿ ಕಲಿಕೆಯಲ್ಲಿ ಹಿಂದುಳಿದ ಮತ್ತು ಕಲಿಕೆಯಲ್ಲಿ ಮುಂದುವರೆದ ಮಕ್ಕಳನ್ನು ಬೇರ್ಪಡಿಸಿ ಪರಿಹಾರಾತ್ಮಕ ವಿಶೇಷ ತರಗತಿ ತೆಗೆದುಕೊಳ್ಳಲಾಗಿದೆ.

----

20ವೈಡಿಆರ್‌3 : ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿವಿಧ ಕೇಂದ್ರಗಳಿಗೆ ಯಾದಗಿರಿ ಡಿಡಿಪಿಐ ಚೆನ್ನಬಸಪ್ಪ ಮುಧೋಳ ಭೇಟಿ ನೀಡಿ, ಪೂರ್ವಸಿದ್ಧತೆಗಳ ಪರಿಶೀಲಿಸಿದರು.

-----

20ವೈಡಿಆರ್‌4 : ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿವಿಧ ಕೇಂದ್ರಗಳಿಗೆ ಯಾದಗಿರಿ ಡಿಡಿಪಿಐ ಚೆನ್ನಬಸಪ್ಪ ಮುಧೋಳ ಭೇಟಿ ನೀಡಿ, ವೆಬ್‌ಕಾಸ್ಟಿಂಗ್‌, ಸಿಸಿಟಿವಿ ಸೌಲಭ್ಯಗಳ ಪರಿಶೀಲಿಸಿದರು.