ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು ಹಾಗೂ ಮಾನ್ಯತೆ ಪಡೆಯದೇ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 18 ಅಕಾಡೆಮಿ, ಟುಟೋರಿಯಲ್ಸ್‌, ಟ್ಯೂಷನ್ ಸೆಂಟರ್‌ಗಳನ್ನು ರದ್ದುಪಡಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣಕುಮಾರ ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

- ಮಾನ್ಯತೆ ಪಡೆದ-ಪಡೆಯದ ಸಂಸ್ಥೆಗಳ ವಿರುದ್ಧ ಕ್ರಮವಾಗಲಿ: ಅಖಿಲ ಭಾರತ ಹಿಂದೂ ಮಹಾಸಭಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು ಹಾಗೂ ಮಾನ್ಯತೆ ಪಡೆಯದೇ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 18 ಅಕಾಡೆಮಿ, ಟುಟೋರಿಯಲ್ಸ್‌, ಟ್ಯೂಷನ್ ಸೆಂಟರ್‌ಗಳನ್ನು ರದ್ದುಪಡಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣಕುಮಾರ ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದ ಇಂತಹ ಅಕಾಡೆಮಿಗಳಲ್ಲಿ ಟೂಷನ್ ಬದಲಿಗೆ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತಿದ್ದು, ಪ್ರತಿ ವಿದ್ಯಾರ್ಥಿಗಳಿಂದ ₹1.5 ಲಕ್ಷದಿಂದ ₹2 ಲಕ್ಷವರೆಗೆ ವಸೂಲು ಮಾಡುತ್ತಿದ್ದಾರೆ. ನೀಟ್‌, ಸಿಇಟಿ ಕೋಚಿಂಗ್ ನೆಪದಲ್ಲಿ ಪಾಲಕರಿಂದ ಹೆಚ್ಚು ಹಣ ವಸೂಲು ಮಾಡಲಾಗುತ್ತಿದೆ ಎಂದರು.

ಸೆ.21ರಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಾವು ಅರ್ಜಿ ಸಲ್ಲಿಸಿದ್ದು, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಸೆ.21ರಂದು ಸಂಬಂಧಿಸಿದ ಎಲ್ಲ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿ, 9-10 ದಿನ ಕಳೆದರೂ ಯಾವುದೇ ಅಕಾಡೆಮಿಯಿಂದ ಉತ್ತರ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಇಲಾಖೆಗೆ ವರದಿ ಸಲ್ಲಿಸಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ. ಟ್ಯುಟೋರಿಯಲ್‌ ಸೆಂಟರ್‌ನಲ್ಲಿ ಕಾಲೇಜು ನಡೆಸಲು ಅವಕಾಶವೇ ಇಲ್ಲ. ಇಲಾಖೆಯ ಪರವಾನಿಗೆ ಪಡೆದು, ಕಾಲೇಜು ನಡೆಸಬೇಕು. ಪರವಾನಗಿ ಪಡೆಯದ ಅಕಾಡೆಮಿಗಳನ್ನು ರದ್ದುಪಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಕೇಂದ್ರದಲ್ಲಿ 18 ಅಕಾಡೆಮಿಗಳಿದ್ದು, ಲಾಡ್ಜ್‌, ಹೋಟೆಲ್‌, ರೆಸ್ಟೋರೆಂಟ್‌ನಂತಿರುವ ಕಟ್ಟಡ, ಗಾಜಿನ ಜಿಮ್‌ನಂತಿರುವ ಕಟ್ಟಡದಲ್ಲಿ ಅಕಾಡೆಮಿ ನಡೆಸಲಾಗುತ್ತಿದೆ. ಅಕಾಡೆಮಿಯಿಂದ ದೂರದಿಂದ ವಿದ್ಯಾರ್ಥಿಗಳನ್ನು ಕಾಲೇಜು ಬಸ್ಸಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಸಂಚರಿಸುತ್ತಾರೆ. ಈಚೆಗೆ ಬಿಲ್ಡಿಂಗ್ ಪೇಮೆಂಟ್ ಹೆಸರಿನಲ್ಲೂ ವಿದ್ಯಾರ್ಥಿ, ಪಾಲಕರನ್ನು ಆಡಳಿತ ಮಂಡಳಿಗಳು ಸುಲಿಗೆ ಮಾಡುತ್ತಿವೆ. ನಿಮ್ಮ ಸಂಸ್ಥೆ, ನಿಮ್ಮ ಕಟ್ಟಡ ನಿರ್ಮಾಣಕ್ಕೆ ಪಾಲಕರನ್ನು ಸುಲಿಗೆ ಮಾಡುವುದು ಏಕೆ? ನಿಮ್ಮ ಭಾರದ ಹೊರೆಯನ್ನು ಬಡ, ಮಧ್ಯಮ ವರ್ಗ, ಗ್ರಾಮೀಣರು, ರೈತಾಪಿ ಪಾಲಕರ ಮೇಲೆ ಯಾಕೆ ಹೇರುತ್ತೀರಿ? ಅನುಮತಿ ಪಡೆದು, ಕಾನೂನುಬದ್ಧವಾಗಿ ಸಂಸ್ಥೆಗಳನ್ನು ನಡೆಸಿ. ನಿಮ್ಮಲ್ಲಿಯೇ ಶಿಸ್ತು ಇಲ್ಲದಿದ್ದರೆ ಮಕ್ಕಳಿಗೆ ಹೇಗೆ ಭ‍ವಿಷ್ಯ ಕಟ್ಟಿಕೊಡುತ್ತೀರಿ ಎಂದು ಜೆ.ಅರುಣಕುಮಾರ ಪ್ರಶ್ನಿಸಿದರು.

ಮಹಾಸಭಾದ ರಾಹುಲ್ ಬೊಮ್ಮ, ಪೃಥ್ವಿ, ಶಶಿ, ಗುರುಮೂರ್ತಿ, ಎಸ್.ಅರುಣಕುಮಾರ ಇತರರು ಇದ್ದರು.

- - -

(ಬಾಕ್ಸ್‌)

* ಆಂಧ್ರ ಬೋಧಕರ ಅವಶ್ಯಕತೆ ಏನಿದೆ?

ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ನೀಟ್, ಸಿಇಟಿ ತರಬೇತಿ ನೀಡುತ್ತಿಲ್ಲ. ಇದನ್ನೇ ಇಂತಹ ಖಾಸಗಿ ಸಂಸ್ಥೆಗಳು ತಮ್ಮ ಆದಾಯದ ಮೂಲ ಮಾಡಿಕೊಂಡಿವೆ. ಆಂಧ್ರಪ್ರದೇಶದಿಂದ ಬೋಧಕರನ್ನು ಕರೆ ತಂದು, ಬೋಧಿಸುವ ಅವಶ್ಯಕತೆ ಏನಿದೆ? ಇಲ್ಲಿನ ಕನ್ನಡಿಗರ ಬೋಧಕರಿಗೆ ಸಾಮರ್ಥ್ಯವಿಲ್ಲವೇ? ಕನ್ನಡಿಗ ಬೋಧಕರಿಗೆ ಅನುಭವ, ಪಾಂಡಿತ್ಯ ಇಲ್ಲವೆಂದು ಆಡಳಿತ ಮಂಡಳಿ ನಿರ್ಧರಿಸಿವೆಯೇ? ಕೆಲವು ಕಾಲೇಜು, ಸಂಸ್ಥೆಗಳು ಮುಂದಿನ ದಿನಗಳಲ್ಲಿ 30 ದಿನದ ತೆಲುಗು ಕೋರ್ಸ್ ಮಾಡಿ, ಮಕ್ಕಳಿಗೆ ಕಾಲೇಜಿಗೆ ಪ್ರವೇಶ ನೀಡಿದರೂ ಅಚ್ಚರಿ ಇಲ್ಲ ಎಂದು ಜೆ.ಅರುಣಕುಮಾರ ಖಾಸಗಿ ಕಾಲೇಜುಗಳ ಆಂಧ್ರ ಬೋಧಕರ ವ್ಯಾಮೋಹದ ಬಗ್ಗೆ ಕಿಡಿಕಾರಿದರು.

- - -

-1ಕೆಡಿವಿಜಿ3: ದಾವಣಗೆರೆಯಲ್ಲಿ ಗುರುವಾರ ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.