ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸ್ ಇಲಾಖೆ 18 ಷರತ್ತುಗಳೊಂದಿಗೆ ಅನುಮತಿ ನೀಡಿದೆ.

ಕಲಬುರಗಿ/ಬೆಂಗಳೂರು : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸ್ ಇಲಾಖೆ 18 ಷರತ್ತುಗಳೊಂದಿಗೆ ಅನುಮತಿ ನೀಡಿದೆ.

ಇದೇ ವೇಳೆ, ಮೈಸೂರು ಜಿಲ್ಲೆ ನಂಜನಗೂಡಲ್ಲೂ ಭಾನುವಾರ ಪಥ ಸಂಚಲನ ಆಯೋಜನೆಯಾಗಿದ್ದು, ಸುತ್ತೂರು ಶ್ರೀ, ಬಿ.ಎಲ್.ಸಂತೋಷ್ ಭಾಗಿ ಆಗಲಿದ್ದಾರೆ. ಈ ಮಧ್ಯೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ತುಮಕೂರು ಹಾಗೂ ಕೋಲಾರದಲ್ಲಿ ಭಾನುವಾರ ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ.

ಪ್ರಚೋದನಕಾರಿ ಬ್ಯಾನರ್ ಅಳವಡಿಸದಂತೆ ಎಚ್ಚರಿಕೆ ವಹಿಸಬೇಕು. ಜನಸಂದಣಿ ನಿಯಂತ್ರಣಕ್ಕೆ ಸ್ವಯಂ ಸೇವಕರ ನಿಯೋಜನೆ ಮಾಡಿಕೊಳ್ಳಬೇಕು. ಅಶ್ಲೀಲ ಭಾಷೆ, ಹಾಡು, ನೃತ್ಯ ಇಲ್ಲದಂತೆ ನೋಡಿಕೊಳ್ಳಬೇಕು ಎಂಬುದೂ ಸೇರಿ 18 ಷರತ್ತು ವಿಧಿಸಿ ಕಲಬುರಗಿಯಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ.

ಆರ್‌ಎಸ್‌ಎಸ್ ಜಿಲ್ಲಾ ಮುಖಂಡರು ನೀಡಿದ ಪಥಸಂಚಲನಕ್ಕೆ ಅನುಮತಿ ಕೋರಿದ ಮನವಿ ಪತ್ರ ಆಧರಿಸಿ ನಗರ ಉಪ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರೆ. ಭಾನುವಾರ ಮಧ್ಯಾಹ್ನ 3ಕ್ಕೆ ನಗರದ ಎಪಿಎಂಸಿ ಬಳಿಯಿಂದ ಸಂಘದ ಗಣವೇಷಧಾರಿಗಳ ಪಥಸಂಚಲನ ಶುರುವಾಗಲಿದ್ದು, ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು, ಸಾವಿರಾರು ಜನರು ಪಥಸಂಚಲನದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಈ ಮಧ್ಯೆ, ತುಮಕೂರು ತಾಲೂಕಿನ ಮಲ್ಲಸಂದ್ರ ಹಾಗೂ ಗುಬ್ಬಿಯ ಚೇಳೂರು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಶನಿವಾರ ಪಥ ಸಂಚಲನ ನಡೆಯಿತು. ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ಭಾನುವಾರ ಪಥಸಂಚಲನಕ್ಕೆ ಕೋರಿದ್ದ ಮನವಿಯನ್ನು ಆರ್‌ಎಸ್‌ಎಸ್‌ ವಾಪಸ್‌ ಪಡೆದಿದ್ದು, ಮುಂದಿನ ದಿನಗಳಲ್ಲಿ ಆಯೋಜಿಸುವುದಾಗಿ ತಿಳಿಸಿದೆ.

ಅನುಮತಿ ನಿರಾಕರಣೆ

ಆದರೆ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ತುಮಕೂರು ಹಾಗೂ ಕೋಲಾರದಲ್ಲಿ ಭಾನುವಾರ ಆಯೋಜಿಸಲು ಉದ್ದೇಶಿಸಿದ್ದ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ನಂತರ, ಅ.27ರ ನಂತರ ಪಥ ಸಂಚಲನ ನಡೆಯುವ ಸಾಧ್ಯತೆಯಿದೆ.

ನಂಜನಗೂಡಲ್ಲಿ ಸುತ್ತೂಶ್ರೀ ಭಾಗಿ

ಇದೇ ವೇಳೆ, ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಭಾನುವಾರ ಆರ್‌ಎಸ್‌ಎಸ್‌ನಿಂದ ಪಥಸಂಚಲನ ಆಯೋಜಿಸಲಾಗಿದ್ದು, ಶ್ರೀಕಂಠೇಶ್ವರ ದೇವಾಲಯದಿಂದ ವಿದ್ಯಾವರ್ಧಕ ಶಾಲೆಯ ಮೈದಾನದವರೆಗೆ ಮಧ್ಯಾಹ್ನ 3.30ಕ್ಕೆ ಪಥಸಂಚಲನ, ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಲ್ಲನಮೂಲೆ ಮಠದ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಭಾಗವಹಿಸುವರು.