ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪಟ್ಟಣದಲ್ಲಿ ಈಗಾಗಲೇ ದ್ರವ ತ್ಯಾಜ್ಯ ಸಂಸ್ಕರಣೆ ಘಟಕವಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಬಳಸಿದ ನೀರನ್ನು ಶುದ್ಧೀಕರಣ ಮಾಡಿ ಮರುಬಳಕೆ ಮಾಡುವ ಸಲುವಾಗಿ ಅಮೃತ ನಗರೋತ್ಥಾನ ಯೋಜನೆಯಡಿ 1.18 ಕೋಟಿ ರುಪಾಯಿ ಮೀಸಲಿರಿಸಲು ಚಿಂತಿಸಲಾಗಿದೆ ಎಂದು ಅಧ್ಯಕ್ಷ ಜಯಾನಂದ ಗೌಡ ತಿಳಿಸಿದರು.ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯ ಜಗದೀಶ್ ಡಿ. ಪಟ್ಟಣ ಪಂಚಾಯಿತಿ ಘನತ್ಯಾಜ್ಯ ಘಟಕದ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿ, ಪ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ. ಆದರೆ ಆರಳಿ ಎಂಬಲ್ಲಿನ ಘನತ್ಯಾಜ್ಯ ಘಟಕದಲ್ಲಿ ಪ್ರತಿ ವರ್ಷ ತ್ಯಾಜ್ಯವಿಲೇಗೆ 3 ಲಕ್ಷ ರು. ಇರಿಸುತ್ತೀರಿ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಕಸವನ್ನು ಸರಿಯಾಗಿ ವಿಲೇ ಮಾಡುತ್ತಿಲ್ಲ. ಸರ್ಕಾರದ ಹಣ ಪೋಲಾಗುತ್ತಿದೆ. ಇಲ್ಲಿ 6 ಮಂದಿ ನೌಕರರಲ್ಲಿ 4 ಮಂದಿ ಮಾತ್ರ ಇದ್ದಾರೆ. ಆದರೆ ವೇತನ ಆರು ಮಂದಿಗೆ ಆಗುತ್ತಿದೆ. ಕಸಕ್ಕೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.ಮುಖ್ಯಾಧಿಕಾರಿ ರಾಜೇಶ್ ಕೆ. ಪ್ರತಿಕ್ರಿಯಿಸಿ, ಘನತ್ಯಾಜ್ಯ ಘಟಕದಲ್ಲಿ ಕಸ ವಿಲೇಗೆ ಜಾಗದ ಸಮಸ್ಯೆಯಿದ್ದು ಇದರ ವಿಸ್ತರಣೆಗೆ ಅನುದಾನ ಬಂದಿದೆ. ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆರು ಮಂದಿ ಕೆಲಸಗಾರರಿದ್ದು, ನಿರ್ವಹಣೆ ಟೆಂಡರ್‌ನಲ್ಲಿ ವಹಿಸಿಕೊಂಡವರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸುತ್ತಾರೆ. ಅವರು ತಿಂಗಳಿಗೆ 16 ಸಾವಿರ ರುಪಾಯಿ ಕೊಡುತ್ತಿದ್ದಾರೆ ಎಂದರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಮೆಸ್ಕಾಂ ಹಳೆ ವಿದ್ಯುತ್ ಲೈನ್ ತೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.ಪಂಚಾಯಿತಿ ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮರ್, ಎಂಜಿನಿಯರ್ ಮಹಾವೀರ ಹಾಗೂ ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ನಿಷೇಧ ಕುರಿತು ಚರ್ಚೆ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಜನರಲ್ಲಿ ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಪ್ರತಿ ಮನೆಗಳಿಗೆ ಬಟ್ಟೆಚೀಲಗಳನ್ನು ಕೊಡುವ ವ್ಯವಸ್ಥೆಯನ್ನು ಪಂಚಾಯಿತಿಯಿಂದ ಮಾಡಲಾಗುವುದು. ಇದಕ್ಕೆ 1.15 ಲಕ್ಷ ರು. ಇರಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.ಸದಸ್ಯರು ಪ್ರತಿಕ್ರಿಯಿಸಿ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುವವರಿಗೂ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ಲಾಸ್ಟಿಕ್ ಬ್ಯಾಗ್ ಮಾರಾಟ ಮಾಡುವವರು ಬಟ್ಟೆಚೀಲ ಮಾರಾಟ ಮಾಡುವಂತೆ ಅವರಲ್ಲಿ ಮನವರಿಕೆ ಮಾಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ರುದ್ರಭೂಮಿಗೆ ಮರುಜೀವ ನೀಡಿ: ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ರುದ್ರಭೂಮಿಗಳ ಅವ್ಯವಸ್ಥೆ ಹೆಚ್ಚಿದೆ. ಪಟ್ಟಣಕ್ಕೆ 40 ಲಕ್ಷ ರು. ಇರಿಸಲಾಗಿದ್ದು, ಕ್ರಿಯಾಯೋಜನೆ ಆಗಿದೆ ಎನ್ನಲಾಗುತ್ತಿದೆ. ಅನುದಾನ ಕಡಿಮೆ ಇದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮನವಿ ಸಲ್ಲಿಸೋಣ ಎಂದು ಸದಸ್ಯ ಜಗದೀಶ್ ಹೇಳಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಟೆಂಡರ್ ಆಗಿದೆ. ಜಿಲ್ಲಾಧಿಕಾರಿ ಹಂತದಲ್ಲಿದ್ದು, ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ನಡೆಸುವುದಾಗಿ ತಿಳಿಸಿದೆ.