ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ 75 ಪ್ರಕರಣಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಶುಕ್ರವಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಿಷನ್ ವಾತ್ಸಲ್ಯ ಮಾರ್ಗಸೂಚಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 180 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಮಂಡ್ಯ - 42, ಮದ್ದೂರು - 15, ಮಳವಳ್ಳಿ - 20, ಶ್ರೀರಂಗಪಟ್ಟಣ- 26, ಪಾಂಡವಪುರ - 25, ನಾಗಮಂಗಲ - 13, ಕೆ.ಆರ್.ಪೇಟೆ - 39 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇವುಗಳಲ್ಲಿ ಒಟ್ಟು 105 ಬಾಲ್ಯ ವಿವಾಹವನ್ನು ತಡೆದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ಐಆರ್ ದಾಖಲಾಗಿವೆ ಎಂದರು.ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸ್ಥಳೀಯ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಬಾಲ್ಯ ವಿವಾಹ ಜರುಗಲಿಕ್ಕೆ ಕಾರಣಗಳೇನು ಎಂಬ ಸಮೀಕ್ಷೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಾಲ್ಯ ವಿವಾಹ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಬಾಲ್ಯ ವಿವಾಹಗಳು ಜರುಗುವ ಹಾಗೂ ಪದೇ ಪದೇ ಮರುಕಳಿಸುವಂತಹ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಇದನ್ನು ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳು ಹಾಗೂ ನಿರಂತರ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಗಮನವಹಿಸಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಗಳು, ವಿಶೇಷ ಪಾಲನೆ ಯೋಜನೆ ನಡೆಯುತ್ತಿರುವ ಬಗೆ ಮತ್ತು ದತ್ತು ಯೋಜನೆಗೆ ಸಂಬಂಧಿಸಿದಂತೆ ದತ್ತು ಪ್ರಕ್ರಿಯೆ ಬಗ್ಗೆ ವಿವರ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ 2 ಸರ್ಕಾರಿ ಬಾಲ ಮಂದಿರಗಳು, 2 ಸರ್ಕಾರಿ ಅನುದಾನಿತ ದತ್ತು ಸೇವಾ ಕೇಂದ್ರಗಳು, 16 ಸರ್ಕಾರೇತರ ಮಕ್ಕಳ ಪಾಲನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಬಾಲನ್ಯಾಯ ಕಾಯ್ದೆಯಡಿ ಒಟ್ಟು 20 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿವೆ. 2 ಮಕ್ಕಳ ಪಾಲನ ಸಂಸ್ಥೆಗಳು ಬಾಲ ನ್ಯಾಯ ಕಾಯ್ದೆಯಡಿ ನವೀಕರಣಗೊಂಡಿವೆ. ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ಉಳಿದ 18 ಸಂಸ್ಥೆಗಳು ಬಾಕಿ ಇವೆ. ಜಿಲ್ಲೆಯಲ್ಲಿ 2023 - 2024 ನೇ ಸಾಲಿನ ಪ್ರಾಯೋಜಕತ್ವ ಯೋಜನೆಯಡಿಯಲ್ಲಿ ಒಟ್ಟು 452 ಫಲಾನುಭವಿಗಳು ಸಹಾಯಧನ ಪಡೆದಿದ್ದು, 2024 - 2025 ನೇ ಸಾಲಿನಲ್ಲಿ ಒಟ್ಟು 167 ಅರ್ಜಿಗಳು ಸ್ವೀಕೃತವಾಗಿವೆ ಎಂದರು.2011 ರಿಂದ ಆಗಸ್ಟ್- 2023 ರ ವರೆಗೆ ಮಕ್ಕಳ ಸಹಾಯವಾಣಿ ಸ್ವಯಂ ಸೇವಾ ಸಂಸ್ಥೆ ಮುಖಾಂತರ ನಡೆಯುತ್ತಿತ್ತು. ಸೆಪ್ಟೆಂಬರ್ - 2023ರಿಂದ ಮಕ್ಕಳ ಸಹಾಯವಾಣಿಯು ಕೇಂದ್ರ ಪುರಸ್ಕೃತ ಯೋಜನೆಯಾದ ಮಿಷನ್ ವಾತ್ಸಲ್ಯ ಯೋಜನೆ ಮಾರ್ಗಸೂಚಿ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸಿಇಒ ಶೇಕ್ ತನ್ವೀರ್ ಆಸಿಫ್ ಮಾತನಾಡಿ, ಜಿಲ್ಲೆಯಲ್ಲಿ 18 ವರ್ಷದೊಳಗಿರುವ ಹೆಣ್ಣುಮಕ್ಕಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದು ಹೆಣ್ಣು ಮಕ್ಕಳು, ಪೋಷಕರಿಗೆ ಮುಂಚಿತವಾಗಿಯೇ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಪೊಲೀಸ್ ಇನ್ಸ್ ಪೆಕ್ಟರ್ ಬಿ.ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ರಾಜಮೂರ್ತಿ, ನಿರೂಪಣಾಧಿಕಾರಿ ಧರಣಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ನಾಗಾನಂದ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಹಾಯ ವಾಣಿಗೆ 365 ಪ್ರಕರಣ ದಾಖಲು
2023- ಸೆಪ್ಟೆಂಬರ್ ತಿಂಗಳಿಂದ 2024 ರ ಮಾರ್ಚ್- 2024 ರವರೆಗೆ ಮಕ್ಕಳ ಸಹಾಯವಾಣಿ - 1098ಗೆ ಒಟ್ಟು 365 ಪ್ರಕರಣಗಳು ದಾಖಲಾಗಿವೆ. ಶೈಕ್ಷಣಿಕ ಸಮಸ್ಯೆ - 84, ಬಾಲ್ಯ ವಿವಾಹ - 78, ಕೌಟುಂಬಿಕ ಸಮಸ್ಯೆ - 11, ವೈದ್ಯಕೀಯ ಸಮಸ್ಯೆ- 1, ಪ್ರಾಯೋಜಕತ್ವ - 59, ದೈಹಿಕ ಹಿಂಸೆ - 34, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - 10, ಬಾಲಕಾರ್ಮಿಕ - 9, ಕಾಣೆಯಾದ ಮಕ್ಕಳು - 30, ಭಿಕ್ಷಾಟಣೆ - 8, ಆಪ್ತ ಸಮಾಲೋಚನೆ - 5, ಇತರೆ - 36 ಪ್ರಕರಣ ಇತ್ಯರ್ಥಪಡಿಸಲಾಗಿದೆ.ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದ ತಕ್ಷಣ ಆಶಾ ಕಾರ್ಯಕರ್ತೆಯರು, ಶಾಲಾ ಹಾಗೂ ಅಂಗನವಾಡಿ ಶಿಕ್ಷಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ಸಾರ್ವಜನಿಕರು ಕೂಡ ಬಾಲ್ಯ ವಿವಾಹಗಳು ಜರುಗದಂತೆ ನೋಡಿಕೊಳ್ಳಬೇಕು.- ಶೇಕ್ ತನ್ವೀರ್ ಆಸಿಫ್ ಜಿಲ್ಲಾ ಪಂಚಾಯ್ತಿ ಸಿಇಒ