185 ಅಂಚೆ ಕಚೇರಿಗೆ ನೂತನ ಕಟ್ಟಡ: ಸಂಸದ ರಾಜಶೇಖರ್‌ ಹಿಟ್ನಾಳ

| Published : Sep 16 2025, 12:03 AM IST

ಸಾರಾಂಶ

ಭಾರತದ ಆತ್ಮ ಗ್ರಾಮದಲ್ಲಿದೆ. ಗ್ರಾಮವು ಸದೃಢವಾದರೆ ದೇಶವು ಸದೃಢವಾದಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು ಎಂದ ಅವರು, ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶ ಜನರ ಆರ್ಥಿಕ ಬೆನ್ನೆಲುಬಾಗಿದೆ.

ಮುನಿರಾಬಾದ್:

ಬಾಡಿಗೆ ಕಟ್ಟಡ, ದೇವಸ್ಥಾನ, ಶಾಲಾ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ 185 ಅಂಚೆ ಕಚೇರಿಗಳಿಗೆ ಮುಂದಿನ ಐದು ವರ್ಷದಲ್ಲಿ ಸಿಎಸ್‌ಆರ್‌ ಅಡಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಸಂಸದ ರಾಜಶೇಖರ್ ಹಿಟ್ನಾಳ್, ಈ ಯೋಜನೆ ದೇಶದಲ್ಲಿ ಪ್ರಪ್ರಥಮವಾಗಿದೆ ಎಂದು ಹೇಳಿದರು.

ಸೋಮವಾರ ಹಿಟ್ನಾಳದ ಮೂರನೇ ವಾರ್ಡ್‌ನಲ್ಲಿ ಕಿರ್ಲೋಸ್ಕರ್ ಸಂಸ್ಥೆ ವತಿಯಿಂದ ಸಿಎಸ್ಆರ್ ಅಡಿ ನಿರ್ಮಿಸುತ್ತಿರುವ ನೂತನ ಅಂಚೆ ಕಚೇರಿಯ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಭಾರತದ ಆತ್ಮ ಗ್ರಾಮದಲ್ಲಿದೆ. ಗ್ರಾಮವು ಸದೃಢವಾದರೆ ದೇಶವು ಸದೃಢವಾದಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು ಎಂದ ಅವರು, ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶ ಜನರ ಆರ್ಥಿಕ ಬೆನ್ನೆಲುಬಾಗಿದೆ ಎಂದರು.

ಕಿರ್ಲೋಸ್ಕರ್ ಸಂಸ್ಥೆ ಸಿಎಸ್ಆರ್ ಅಡಿಯಲ್ಲಿ 18 ಅಂಚೆ ಕಚೇರಿಗಳ ನೂತನ ಕಟ್ಟಡ ಕಟ್ಟಲು ಮುಂದಾಗಿದೆ. ಇದರಂತೆ ಮುಕುಂದ ಸ್ಟೀಲ್, ಹೊಸಪೇಟೆ ಸ್ಟೀಲ್, ಎಕ್ಸ್ ಇಂಡಿಯಾ ಹಾಗೂ ಸುಮಿ ಐರನ್ ಅಂಡ್ ಸ್ಟೀಲ್ ಕಾರ್ಖಾನೆಗಳು ಸಿಎಸ್‌ಆರ್‌ ಅಡಿ ಅಂಚೆ ಕಚೇರಿಯ ನೂತನ ಕಟ್ಟಡ ನಿರ್ಮಿಸಲು ಮುಂದೆ ಬಂದಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಗೆ ತನ್ನದೇ ಆದ ಸ್ವಂತ ಕಟ್ಟಡ ಲಭಿಸಲಿದೆ ಎಂದ ಅವರು, ಹಿಟ್ನಾಳದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಮಾದರಿ ಸರ್ಕಾರಿ ಶಾಲೆ ನಿರ್ಮಿಸಲಾಗುತ್ತಿದ್ದು ಈಗಾಗಲೇ ಇದಕ್ಕೆ ₹ 3 ಕೋಟಿ ವ್ಯಯಿಸಲಾಗಿದೆ. ಉಳಿದ ಮೊತ್ತದ ಕಾಮಗಾರಿಯನ್ನು ಕಿರ್ಲೋಸ್ಕರ್ ಸಮಸ್ಥೆ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು. ಈ ಶಾಲೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸೌಲಭ್ಯ ಹೊಂದಿದ ಅತ್ಯಾಧುನಿಕ ಶಾಲೆಯಾಗಲಿದೆ ಎಂದರು.

ಈ ವೇಳೆ ಮಾತನಾಡಿದ ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌.ವಿ. ಗುಮಾಸ್ತೆ, ಹಿಟ್ನಾಳ್ ಹಾಗೂ ಅಗಲಕೆರೆಯಲ್ಲಿ ಅಂಚೆ ಕಚೇರಿಯ ನೂತನ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿದ್ದು, ಶೀಘ್ರವೇ ನಿರ್ಮಿಸಲಾಗುವುದು. ಉಳಿದ ಕಟ್ಟಡಗಳನ್ನು ಹಂತ-ಹಂತವಾಗಿ ನಿರ್ಮಿಸಲಾಗುವುದು ಎಂದರು. ಕಿರ್ಲೋಸ್ಕರ್ ಸಂಸ್ಥೆಯು ಗ್ರಾಮೀಣ ಭಾಗದ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದೆ ಎಂದು ಹೇಳಿದರು.

ಈ ವೇಳೆ ಹಿಟ್ನಾಳ್ ಗ್ರಾಪಂ ಅಧ್ಯಕ್ಷೆ ಸುಜಾತಾ ಮಾರುತಿ, ಉಪಾಧ್ಯಕ್ಷ ರಾಜಶೇಖರ ಬಂಡಿಹಾಳ, ಕಿರ್ಲೋಸ್ಕರ್ ಸಂಸ್ಥೆಯ ಉಪಾಧ್ಯಕ್ಷ ನಾರಾಯಣ್, ಜನರಲ್ ಮ್ಯಾನೇಜರ್ ಉದ್ದವ ಕುಲಕರ್ಣಿ, ಸಹಕಾರಿ ಧುರೀಣ ರಮೇಶ ವೈದ್ಯ ಉಪಸ್ಥಿತರಿದ್ದರು.