ಮೂವರು ಕಳ್ಳರಿಂದ ₹25 ಲಕ್ಷದ 19 ಬೈಕ್‌ ಜಪ್ತಿ

| Published : Aug 07 2024, 01:33 AM IST

ಸಾರಾಂಶ

ಮನೆ ಬಳಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ಲೇಔಟ್‌ ನಿವಾಸಿ ಆನಂದ (28), ಬೈರತಿ ನಿವಾಸಿ ರಜಿನಿ ಅಲಿಯಾಸ್‌ ಅಪ್ಪು (26) ಹಾಗೂ ನಾಗವಾರಪಾಳ್ಯ ನಿವಾಸಿ ಪುಷ್ಪರಾಜ್‌ (22) ಬಂಧಿತರು. ಆರೋಪಿಗಳಿಂದ ₹24.85 ಲಕ್ಷ ಮೌಲ್ಯದ 19 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಾಗವಾರಪಾಳ್ಯ ಮುಖ್ಯರಸ್ತೆಯ ಮನೆಯ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾದ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಮೂವರು ತಮಿಳುನಾಡು ಮೂಲದವರು. ಕೆಲವು ವರ್ಷಗಳಿಂದ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಸುಲಭವಾಗಿ ಹಣಗಳಿಸಲು ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಇಳಿದಿದ್ದರು.

ತಮಿಳುನಾಡಿನಲ್ಲಿ ಮಾರಾಟ:

ಕದ್ದ ದ್ವಿಚಕ್ರ ವಾಹನಗಳನ್ನು ತಮಿಳುನಾಡಿನ ತಿರುಪತ್ತೂರು, ಅರಕೋಣಂ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಚಿತರಿಗೆ ₹15-20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿಯುತ್ತಿದ್ದರು. ಈ ಹಿಂದೆ ಸಹ ದ್ವಿಚಕ್ರ ವಾಹನಗಳು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು, ಜಾಮೀನು ಪಡೆದು ಹೊರಗೆ ಬಂದು ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೂವರು ಒಟ್ಟಿಗೇ ಸೆರೆ

ನಾಗವಾರಪಾಳ್ಯ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಕಳವು ಸಂಬಂಧ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಕ್ಯಾಮರಾ ಪರಿಶೀಲನೆ ವೇಳೆ ಆರೋಪಿಗಳು ಸುಳಿವು ಸಿಕ್ಕಿತು. ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಬೆನ್ನಗಾನಹಳ್ಳಿ ಬಸ್‌ ನಿಲ್ದಾಣದ ಬಳಿ ದ್ವಿಚಕ್ರ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದ್ವಿಚಕ್ರ ವಾಹನ ಕಳ್ಳತನ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.19 ಪ್ರಕರಣಗಳು ಪತ್ತೆ

ಆರೋಪಿಗಳ ಬಂಧನದಿಂದ ಬೈಯಪ್ಪನಹಳ್ಳಿ, ಹೆಣ್ಣೂರು ತಲಾ ಮೂರು, ಕೆ.ಜಿ.ಹಳ್ಳಿ, ಎಚ್‌ಎಎಲ್‌, ವಿವೇಕನಗರ ತಲಾ ಎರಡು, ಜೆ.ಸಿ.ನಗರ, ಮಾರತ್‌ಹಳ್ಳಿ, ಕಾಡುಗೋಡಿ, ಕೆ.ಆರ್‌.ಪುರ, ಮಾರ್ಕೆಟ್‌ ಠಾಣೆ, ಗೋವಿಂದಪುರ, ಕೊತ್ತನೂರು, ಬಾಣಸವಾಡಿ ತಲಾ ಒಂದು ಸೇರಿದಂತೆ ಒಟ್ಟು 19 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.