ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತ- ಪಾಕಿಸ್ತಾನ ನಡುವೆ 1971ರಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ಸ್ಮರಣಾರ್ಥ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ಸೋಮವಾರ ವಿಜಯ ದಿವಸ್ ಆಚರಿಸಲಾಯಿತು.ಮಾಜಿ ಸೈನಿಕರ ಸಂಘದ ಮಾರ್ಗದರ್ಶಕ ಕರ್ನಲ್ ಐ.ಎನ್. ರೈ ಮಾತನಾಡಿ, 1971ರ ಇಂಡೋ- ಪಾಕ್ ಮಹತ್ವಪೂರ್ಣ ಯುದ್ಧದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿತ್ತು. ಪೂರ್ವ ಪಾಕಿಸ್ತಾನದ ಲೆ.ಜ.ಎ.ಎ.ಕೆ. ನಿಯಾಝಿ ಅವರು 93 ಸಾವಿರ ಪಾಕಿಸ್ತಾನಿ ಸೈನಿಕ ಮತ್ತು ಅರೆಸೈನಿಕರೊಂದಿಗೆ ಭಾರತದ ಲೆ.ಜ.ಜೆ.ಎಸ್. ಆರೋರ ಅವರಿಗೆ ಢಾಕಾದ ರಾಮ್ನಾ ಕ್ರೀಡಾಂಗಣದಲ್ಲಿ ಶರಣಾಗಿದ್ದರು. ಅತಿ ಕಡಿಮೆ ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಯುದ್ಧ ಕೈದಿಗಳು ಶರಣಾಗಿರುವುದು ಎರಡನೇ ಮಹಾಯುದ್ಧದ ಅನಂತರ ಅದೇ ಮೊದಲು. ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಕರ್ನಲ್ ಎನ್. ಶರತ್ ಭಂಡಾರಿ, ಸಂಘದ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್, ಕೋಶಾಧಿಕಾರಿ ಪಿ.ಒ. ಸುಧೀರ್ ಪೈ ಮತ್ತಿತರರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾ. ದೀಪಕ್ ಅಡ್ಯಂತಾಯ ವಂದಿಸಿದರು.