19ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ನ. 18 ಹಾಗೂ 19ರಂದು ಜರುಗಲಿದೆ.

ಧಾರವಾಡ:

19ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ನ. 18 ಹಾಗೂ 19ರಂದು ಜರುಗಲಿದ್ದು, ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಹಿರಿಯ ಸಾಹಿತಿ ನಾಡೋಜ ಗೊ.ರು. ಚೆನ್ನಬಸಪ್ಪ ಗುರುವಾರ ಬೆಳಗ್ಗೆ 10ಕ್ಕೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಆಶಯ ನುಡಿ ಹೇಳಲಿದ್ದು, ಪರಿಷತ್‌ ಧ್ವಜವನ್ನು ಈ ಹಿಂದಿನ ಸರ್ವಾಧ್ಯಕ್ಷರಾದ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಹಾಲಿ ಸರ್ವಾಧ್ಯಕ್ಷರಿಗೆ ಹಸ್ತಾಂತರ ಮಾಡುವರು. ಕೃಷಿ ವಿವಿ ಕುಲಪತಿ ಡಾ. ಎನ್.ಬಿ. ಪ್ರಕಾಶ ಅಧ್ಯಕ್ಷತೆ ವಹಿಸುವರು. ಇದಕ್ಕೂ ಮುಂಚೆ ನಗರದಲ್ಲಿ ಕನ್ನಡ ಜಾಗೃತಿ ನಡೆಯಲಿದೆ ಎಂದರು.

ಮಧ್ಯಾಹ್ನ 12ರ ನಂತರ ಡಾ. ಕೆ.ಆರ್‌. ದುರ್ಗಾದಾಸ್‌ ಅಧ್ಯಕ್ಷತೆಯಲ್ಲಿ ಜನಪದ ಎಂಬ ಮೊದಲ ಗೋಷ್ಠಿಯಲ್ಲಿ ಜನಪದ ಸಾಹಿತ್ಯದಲ್ಲಿ ದಾಂಪತ್ಯ, ವೃತ್ತಗಳು ಮತ್ತು ಮೂಢನಂಬಿಕೆಗಳ ಕುರಿತು ಚರ್ಚೆ ನಡೆಯಲಿದೆ. ಶಂಕರ ಹಲಗತ್ತಿ ಅಧ್ಯಕ್ಷತೆಯಲ್ಲಿ ಆಹಾರ-ಆರೋಗ್ಯ-ಪರಿಸರ ಗೋಷ್ಠಿಯಲ್ಲಿ ಆರೋಗ್ಯ ಮತ್ತು ರೋಗಗಳು, ಪರಿಸರ ಮತ್ತು ಅಭಿವೃದ್ಧಿ ವಿಷಯಗಳ ಚರ್ಚೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ನ. 19ರಂದು ಬೆಳಗ್ಗೆ 9.30ಕ್ಕೆ ಡಾ. ಮಲ್ಲಿಕಾ ಘಂಟಿ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಆಧುನಿಕ ರಂಗಭೂಮಿ-ಸಮಾಜ ಪರಿವರ್ತನೆ, ಹಳೆಗನ್ನಡ ಓದು ಕುರಿತು ಚಿಂತಕರು ವಿಷಯ ಮಂಡಿಸುತ್ತಾರೆ. ನಂತರ ಡಾ. ಶಾಂತಿನಾಥ ದಿಬ್ಬದ ಅಧ್ಯಕ್ಷತೆಯಲ್ಲಿ ಚಿಂತನೆ ಗೋಷ್ಠಿಯಲ್ಲಿ ಸಂಶೋಧನೆಯ ಇತ್ತೀಚಿನ ಒಲವುಗಳು, ಭಾಷೆ-ಸಾಹಿತ್ಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಕುರಿತು ಚಿಂತಕರು ವಿಷಯ ಮಂಡಿಸುವರು. ಮಧ್ಯಾಹ್ನ ಊಟದ ನಂತರ ಸರ್ವಾಧ್ಯಕ್ಷರೊಂದಿಗೆ ಸಂವಾದ, ತದನಂತರ ನಾ ಮೆಚ್ಚಿದ ಕವಿಯ ಕವನಗಳನ್ನು ಆರು ಜನ ಕವಿಗಳು ವಾಚಿಸುವರು. ಸಂಜೆ 5ಕ್ಕೆ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಹಿರಿಯ ಸಾಹಿತಿ ಬಸವರಾಜ ಸಾದರ ಸಮಾರೋಪ ನುಡಿ ಹೇಳುವರು ಎಂದು ಡಾ. ಲಿಂಗರಾಜ ಅಂಗಡಿ ತಿಳಿಸಿದರು.

ಕಸಾಪ ಪದಾಧಿಕಾರಿಗಳಾದ ಮಹಾಂತೇಶ ನರೇಗಲ್‌, ಪ್ರೊ. ಕೆ.ಎಸ್‌. ಕೌಜಲಗಿ, ಡಾ. ಜಿನದತ್ತ ಹಡಗಲಿ, ಡಾ. ಎಸ್‌.ಎಸ್‌. ದೊಡಮನಿ ಮತ್ತಿತರರು ಇದ್ದರು. ಪರಿಷತ್‌ಗೆ ಸ್ಪರ್ಧಿಸುವುದಿಲ್ಲ..

ಕಳೆದ ಮೂರು ಅವಧಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಈ ಸಮ್ಮೇಳನ ಮುಗಿದ ಕೂಡಲೇ ನ. 23ಕ್ಕೆ ಈ ಬಾರಿಯ ಅವಧಿ ಮುಗಿಯಲಿದೆ. ಇನ್ಮುಂದೆ ಪರಿಷತ್‌ನ ಜಿಲ್ಲಾ ಅಥವಾ ರಾಜ್ಯದ ಚುನಾವಣೆ ಸ್ಪರ್ಧಿಸುವುದಿಲ್ಲ. ಕರ್ನಾಟಕ ವಿದ್ಯಾವರ್ಧಕ ಸಂಘ ಅಂತಹ ಸಂಘಟನೆಗಳಲ್ಲಿ ಕನ್ನಡದ ಸೇವೆ ಮಾಡಲು ಚಿಂತಿಸಿದ್ದೇನೆ ಎಂದು ಡಾ. ಲಿಂಗರಾಜ ಅಂಗಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.