ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಗದಗ ಗ್ರಾಮೀಣ ಠಾಣೆ ಪೊಲೀಸರು, ಇಬ್ಬರು ಅಂತರ್ ರಾಜ್ಯ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಿ, ಅವರಿಂದ ₹1.17 ಲಕ್ಷ ಮೌಲ್ಯದ 2.34 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಗದಗ

ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಗದಗ ಗ್ರಾಮೀಣ ಠಾಣೆ ಪೊಲೀಸರು, ಇಬ್ಬರು ಅಂತರ್ ರಾಜ್ಯ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಿ, ಅವರಿಂದ ₹1.17 ಲಕ್ಷ ಮೌಲ್ಯದ 2.34 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗದಗದ ಸಬ್ ಜೈಲ್ ಹತ್ತಿರದ ಸೆಟ್ಲಮೆಂಟ್ ನಿವಾಸಿ ಮಂಜುನಾಥ ಸುಕದೇವ ಜಾಧವ (36), ಗಂಗಿಮಡಿಯ ಬಾಷಾಸಾಬ ಅಬ್ದುಲಸಾಬ ಬುವಾಜಿ (26) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ಆಕಾಶ ನಾಗನಾಥ ಕಡಕೇಕರ (23) ಮತ್ತು ರವಿ ಶಿವಾಜಿ ಕಡಕೇಕರ (20) ಬಂಧಿತರು.

ಅ. 17ರಂದು ಗದಗ ನಗರದ ಗಂಗಿಮಡಿಯ ಹೊಸ ಅಪಾರ್ಟ್‌ಮೆಂಟ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ಗದಗ ಗ್ರಾಮೀಣ ಪೊಲೀಸ್ ಇನ್‌ ಸ್ಪೆಕ್ಟರ್ ಸಿದ್ಧರಾಮೇಶ್ವರ ಗಡೇದ ಮತ್ತು ಸಿಬ್ಬಂದಿ ಮಹಿಬೂಬ ವಡ್ಡಟ್ಟಿ, ಪ್ರಕಾಶ ಗಾಣಿಗೇರ, ಮಹೇಶ ಗೊಳ, ಅನಿಲ್ ಬನ್ನಿಕೊಪ್ಪ, ಹುಸೇನಸಾಬ ಮ್ಯಾಗೇಳಮನಿ ಅವರನ್ನೊಳಗೊಂಡ ವಿಶೇಷ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ದಂಧೆಯ ಸ್ವರೂಪ:

ಸೊಲ್ಲಾಪುರದಿಂದ ಆಕಾಶ ಕಡಕೇಕರ ಮತ್ತು ರವಿ ಕಡಕೇಕರ ಗಾಂಜಾ ತಂದು ಕೊಡುತ್ತಿದ್ದರು. ಆರೋಪಿ ಮಂಜುನಾಥ ಜಾಧವ ಅದನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಬಾಷಾಸಾಬ ಬುವಾಜಿಗೆ ಪ್ರತಿ ಪ್ಯಾಕೆಟ್‌ಗೆ ₹200ರಂತೆ ಮಾರಾಟ ಮಾಡುತ್ತಿದ್ದನು. ನಂತರ ಬಾಷಾಸಾಬ ಆ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ₹300ರಿಂದ 400ರವರೆಗೆ ಮಾರಾಟ ಮಾಡುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ ₹117050 ಮೌಲ್ಯದ 2 ಕೆಜಿ 34 ಗ್ರಾಂ ಒಣ ಗಾಂಜಾ, ಗಾಂಜಾ ಚೀಟಿಗಳು, ತೂಕದ ಮಷಿನ್, ಪ್ಲಾಸ್ಟಿಕ್ ಪ್ಯಾಕೆಟ್ ಬಂಡಲ್, ಒಂದು ಸ್ಟೇಪ್ಲರ್, ಒಂದು ಸ್ಯಾಮ್‌ ಸಂಗ್ ಮೊಬೈಲ್ ಹಾಗೂ ಗಾಂಜಾ ಮಾರಾಟದಿಂದ ಬಂದ ನಗದು 1200 ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.