ಸಾರಾಂಶ
ರೋಣ: ತಾಲೂಕಿನ ಬೆಳವಣಿಕಿ ಗ್ರಾಮದ ರೈತರೊಬ್ಬರ ಖಾತೆಗೆ ಬೆಳೆ ಸಾಲದ ರೂಪದಲ್ಲಿ ಜಮೆಯಾದ 2.50 ಲಕ್ಷ ರು.ಗಳಲ್ಲಿ 2.40 ಲಕ್ಷ ರು.ವನ್ನು ಸೈಬರ್ ವಂಚಕರು ತಕ್ಷಣವೇ ಎತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಂಚನೆಗೊಂಡ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳವಣಿಕಿ ಗ್ರಾಮದ ರೈತ ಶರಣಪ್ಪ ಶಿವಸಿಂಪಿ ಅವರ ಬೆಳವಣಿಕಿ ಕೆನರಾ ಬ್ಯಾಂಕ್ ಖಾತೆಗೆ ಆ.27ರಂದು ₹ 2.50 ಲಕ್ಷ ಬೆಳೆ ಸಾಲ ಜಮಾ ಆಗಿದೆ. ಆದರೆ ಅದೇ ದಿನ ಸಂಜೆ 6 ಗಂಟೆಗೆ ಆನ್‌ಲೈನ್ ವಂಚಕರು ರೈತರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ. ಖಾತೆಯಲ್ಲಿದ್ದ ₹ 2,52, 242ಗಳಲ್ಲಿ ಮೊದಲು ₹1,90,000 ಎಗರಿಸಿದ್ದು, ನಂತರ ₹ 50, ಆ ನಂತರ ₹49,999 ಸಾವಿರ ಎಗರಿಸಿದ್ದಾರೆ.ಈ ಕುರಿತು ರೈತನ ಮೊಬೈಲ್ ಗೆ ಮೆಸೆಜ್ ಬರುತ್ತಿದಂತೆ ಗಾಬರಿಯಾದ ರೈತ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆ ಆ. 28 ರಂದು ನೇರವಾಗಿ ಬೆಳವಣಿಕಿಯಲ್ಲಿನ ಕೆನರಾ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಆನ್‌ಲೈನ್ ಮೂಲಕ ಹಣ ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ರೈತ ಶರಣಪ್ಪ ಶಿವಸಿಂಪಿ ಸೆ.2 ರಂದು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪಿ.ಎಸ್.ಐ ಪ್ರಕಾಶ ಬಣಕಾರ ತನಿಖೆ ಮುಂದುವರಿಸಿದ್ದಾರೆ.
ಜನರಲ್ಲಿ ಭಯ: ಇತ್ತೀಚಿನ ದಿನಗಳಲ್ಲಿ ಜನರ ಖಾತೆಯಿಂದ ಹಣ ಎಗರಿಸುವ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಲು ಹಿಂದೇಟು ಹಾಕುವಂತಾಗಿದೆ. ಅದರಲ್ಲೂ ಬಹುತೇಕ ಕೆನರಾ ಬ್ಯಾಂಕ್ ಖಾತೆಯಿಂದಲೇ ವಂಚಕರು ಆನ್‌ಲೈನ್ ಮೂಲಕ ಹಣ ಎಗರಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೇ. 2 ರಂದು ರೋಣ ಪಟ್ಟಣದ ನಿವೃತ್ತ ನೌಕರರ ಕೆನರಾ ಬ್ಯಾಂಕ್ ಖಾತೆಯಿಂದ ₹ 4,50,000 ಹಣ, ತಾಲೂಕಿನ ನೈನಾಪುರ ಗ್ರಾಮದ ನೌಕರನ ಕೆನರಾ ಬ್ಯಾಂಕ್ ಖಾತೆಯಿಂದ ₹ 3,50,000 ಲಕ್ಷ , ಹಿರೇಮಣ್ಣೂರ ಗ್ರಾಮದ ವಿರೇಸಾ ಸಂಗಳದ ಅವರ ರೋಣದಲ್ಲಿನ ಕೆನರಾ ಬ್ಯಾಂಕ್ ಖಾತೆಯಿಂದ ₹ 49,000 ಸಾವಿರ ಹಣ ವಂಚನೆ, ಹೀಗೆ ಅನೇಕ ಪ್ರಕರಣಗಳ ರೋಣ ತಾಲೂಕಿನಲ್ಲಿ ನಡೆದಿವೆ. ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.ಸೈಬರ್ ಇಲಾಖೆ ನಡೆ ಜನರಲ್ಲಿ ಬೇಸರ: ತಾಲೂಕಿನಾದ್ಯಂತ ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೆ ಇವೆ. ಕಷ್ಟಪಟ್ಟು ದುಡಿದ ಹಣ ವಂಚಕರ ಪಾಲಾಗುತ್ತಿದೆ. ವಂಚನೆಗೊಳಗಾದವರು ನ್ಯಾಯಕ್ಕಾಗಿ ಪೊಲೀಸರ್ ಮೊರೆ ಹೋಗುತ್ತಿದ್ದಾರೆ. ವಿಪರ್ಯಾಸವೆಂದರೆ ಈವರೆಗೂ ಪೊಲೀಸರಾಗಲಿ, ಸೈಬರ್ ವಿಭಾಗದವರಾಗಲಿ ರೋಣ ತಾಲೂಕಿನಲ್ಲಿ ನಡೆದ ವಂಚನೆ ಪ್ರಕರಣ ಬೇಧಿಸಿಲ್ಲ,
ಸೈಬರ್ ಅಪರಾಧ ಪ್ರಕರಣ ತಡೆಗಟ್ಟುವಲ್ಲಿ ಸೈಬರ್ ಪೊಲೀಸ್ ಇಲಾಖೆ ವಿಫಲವಾಗುತ್ತಿರುವುದನ್ನು ಜನತೆ ಖಂಡಿಸಿದ್ದಾರೆ. ಮತ್ತೊಂದೆಡೆ ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಜನತೆಯನ್ನು ಜಾಗೃತಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಇಲಾಖೆ ಹಲವು ಬಾರಿ ಆಶ್ವಾಸನೆ ನೀಡಿದರೂ ಇಂದಿಗೂ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬುದು ಜನತೆಯ ಆರೋಪವಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಸೈಬರ್ ವಂಚನೆ ತಡೆಯುವಲ್ಲಿ ಮುಂದಾಗಬೇಕಿದೆ.