ಸಾರಾಂಶ
ಮುಂಡರಗಿ: ಸಮಗ್ರ ಶಿರಹಟ್ಟಿ ಮತ ಕ್ಷೇತ್ರದ ಅಭಿವೃದ್ಧಿಗಾಗಿ 2.50 ಕೋಟಿ ರು.ಗಳ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಮುಂಡರಗಿ ಪಟ್ಟಣದಲ್ಲಿ 2022-23ನೇ ಸಾಲಿನ 15ನೇ ಹಣಕಾಸು ಅನುದಾನದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಹಾಗೂ ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ, ಸಾರ್ವಜನಿಕ ಶೌಚಾಲಯ, ಸುಮುದಾಯ ಶೌಚಾಲಯ, ಅಸ್ಟಿರೇಷ್ವಲ್ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣ ಸೇರಿದಂತೆ 2.29 ಕೋಟಿ. ರು.ಗಳ ಅನುದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾವು ಶಾಸಕರಾದಾಗಿನಿಂದ ಇದುವರೆಗೂ ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಪ್ರದೇಶಗಳಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ಕಾಮಗಾರಿಗಳು ಸಹ ನಡೆಯುತ್ತಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ಶೀಘ್ರದಲ್ಲಿಯೇ 2.50 ಕೋಟಿ ಮಂಜೂರಾಗಲಿದ್ದು, ಕ್ಷೇತ್ರಾದ್ಯಂತ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಈಗಾಗಲೇ ಬರಗಾಲ ತಾಂಡವಾಡುತ್ತಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಹೊಟ್ಟು, ಮೇವು ಸೇರಿದಂತೆ ಬರಗಾಲಕ್ಕೆ ಸಂಬಂಧಿಸಿದಂತೆ ಅತೀ ಅವಶ್ಯವಿರುವ ಕಾರ್ಯಗಳನ್ನು ಮಾಡುವುದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚಿಸಿದ್ದು, ಅದನ್ನು ಕಾಟಾಚಾರಕ್ಕೆ ಮಾಡಿದಂತೆ ಕಾಣುತ್ತಿದೆ. ಇದುವರೆಗೂ ಆ ಕಮಿಟಿಯ ವ್ಯಾಪ್ತಿಯಲ್ಲಿ ಜರುಗಿದ ಅನೇಕ ಸಭೆಗಳಿಗೆ ಹೋಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರೂ ಸಹ ಯಾವುದೇ ಕೆಲಸಗಳು ನಡೆಯುವುದಾಗಲಿ, ಯಾವುದೇ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದ್ದಾಗಲಿ ಆಗಿಲ್ಲ. ಕೇವಲ ನಮ್ಮ ಸಮಾಧಾನಕ್ಕಾಗಿ ಈ ಕಮಿಟಿ ಮಾಡಿದಂತೆ ಕಂಡು ಬರುತ್ತಿದೆ ಎಂದರು.
ಈಗಾಗಲೇ ನನ್ನ ಕ್ಷೇತ್ರದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಬೋರ್ ವೆಲ್ ಹಾಕಲು ಸಹ ಹಣ ಕೊಡುತ್ತಿಲ್ಲ. ಅದೇ ರೀತಿ ಹಮ್ಮಿಗಿ ಬ್ಯಾರೇಜಿನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈಗಾಗಲೇ ಭದ್ರಾ ಜಲಾಶಯದಿಂದ ನೀರು ಬಿಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ನೀರಿನ ಕೊರತೆಯಾಗುವ ಲಕ್ಷಣವಿದ್ದು, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನಲ್ಲಿಯೂ ಸಹ ನೀರಿನ ತೊಂದರೆಯಾಗುವ ಲಕ್ಷಣಗಳು ಕಂಡುಬರುತ್ತಿದೆ. ಟಾಸ್ಕ್ ಫೋಸ್ರ್ ಕಮಿಟಿ ವತಿಯಿಂದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಜಾನುವಾರುಗಳಿಗೆ ಕ್ಷೇತ್ರದಲ್ಲಿ ಇದುವರೆಗೂ ಎಲ್ಲಿಯೂ ಗೋಶಾಲೆಗಳನ್ನು ತೆರೆದಿಲ್ಲ, ಈ ಎಲ್ಲ ಕೆಲಸಗಳನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಬೇಕು. ಮುಂಡರಗಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ತಪ್ಪಿಸುವುದಕ್ಕಾಗಿ ನದಿಯಿಂದ ನೇರವಾಗಿ ಪೈಪ್‌ಲೈನ್ ಮಾಡುವ ಮೂಲಕ ದಿನದ 24 ತಾಸು ನೀರು ದೊರೆಯುವಂತೆ ಮಾಡಲು ಯೋಚಿಸಲಾಗಿದೆ. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳ ಕೊರತೆ ಇದ್ದು, ಅದಕ್ಕಾಗಿ ವಿವಿಧೆಡೆಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಮಾಡುವುದಕ್ಕಾಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಶಿವಪ್ಪ ಚಿಕ್ಕಣ್ಣವರ, ದೇವಕ್ಕ ದಂಡಿನ, ಜ್ಯೋತಿ ಹಾನಗಲ್, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ಮೈಲಾರಪ್ಪ ಕಲಕೇರಿ, ಎಸ್.ಎಸ್. ಗಡ್ಡದ, ರವೀಂದ್ರಗೌಡ ಪಾಟೀಲ, ರಂಗಪ್ಪ ಕೋಳಿ, ಶ್ರೀನಿವಾಸ ಅಬ್ಬಿಗೇರಿ, ಶಂಕರ್ ಉಳ್ಳಾಗಡ್ಡಿ, ಮಂಜಪ್ಪ ದಂಡಿನ, ಪುರಸಭೆ ಮುಖ್ಯಾಧಿಕಾರಿ ಐ.ಜಿ. ಕೊಣ್ಣೂರ ಸೇರಿದಂತೆ ಅನೇಕರು ಅನೇಕ ಉಪಸ್ಥಿತರಿದ್ದರು.