ಸಾರಾಂಶ
ದುಷ್ಕರ್ಮಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಯುವಕನೊಬ್ಬನಿಗೆ ಪಾರ್ಟ್ ಟೈಮ್ ಕೆಲಸದ ಸಂದೇಶ ಕಳುಹಿಸಿ ಆತನದಿಂದ ₹2.58 ಲಕ್ಷ ಹಾಕಿಸಿಕೊಂಡು ವಂಚಿಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದುಷ್ಕರ್ಮಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಯುವಕನೊಬ್ಬನಿಗೆ ಪಾರ್ಟ್ ಟೈಮ್ ಕೆಲಸದ ಸಂದೇಶ ಕಳುಹಿಸಿ ಆತನದಿಂದ ₹2.58 ಲಕ್ಷ ಹಾಕಿಸಿಕೊಂಡು ವಂಚಿಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಂಚನೆಗೆ ಒಳಗಾದ ಹೊಸ ರೋಡ್ ನಿವಾಸಿ ಎ.ಬಿ.ಚರಣ್ ಕುಮಾರ್ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಚರಣ್‌ಕುಮಾರ್‌ಗೆ ಕಳೆದ ಆಗಸ್ಟ್‌ನಲ್ಲಿ ಟೆಲಿಗ್ರಾಮ್ ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿಯು ಪಾರ್ಟ್ ಟೈಮ್ ಕೆಲಸದ ಸಂದೇಶ ಕಳುಹಿಸಿದ್ದಾನೆ. ಈ ಬಗ್ಗೆ ಆಸಕ್ತಿ ತೋರಿಸಿದ ಚರಣ್ ಕುಮಾರ್ ಅವರಿಂದ ದುಷ್ಕರ್ಮಿಗಳು ಮೊದಲಿಗೆ ಸ್ವಲ್ಪ ಹಣ ಕಟ್ಟಿಸಿಕೊಂಡು ಬಳಿಕ ಲಾಭವನ್ನು ಸೇರಿಸಿ ಹೆಚ್ಚಿನ ಹಣ ವಾಪಾಸ್ ಹಾಕಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ.ಇದನ್ನು ನಂಬಿದ ಚರಣ್ ಕುಮಾರ್, ದುಷ್ಕರ್ಮಿಗಳ ಸೂಚನೆ ಮೇರೆಗೆ ವಿವಿಧ ಹಂತಗಳಲ್ಲಿ ₹2.58 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಯಾವುದೇ ಹಣ ನೀಡದೆ ವಂಚಿಸಿದ್ದಾರೆ. ದುಷ್ಕರ್ಮಿಗಳು ಸಂಪರ್ಕ ಕಡಿತ ಮಾಡಿಕೊಂಡು ಹಿನ್ನೆಲೆಯಲ್ಲಿ ಚರಣ್‌ಕುಮಾರ್ ತಾನು ವಂಚನೆಗೆ ಒಳಾಗಿರುವುದು ಅರಿವಿಗೆ ಬಂದ ಬಳಿಕ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.