ಮುಂಗಾರು ಮಳೆಯ ತೀವ್ರ ಕೊರತೆಯಿಂದ ಬರದ ಛಾಯೆ ಎಲ್ಲೆಡೆ ಆವರಿಸಿದ್ದು ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಇದಕ್ಕೆ ಪೂರಕವೆಂಬಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು 2.88 ಲಕ್ಷ (ಶೇ.95) ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಬಸವರಾಜ ಹಿರೇಮಠ

ಧಾರವಾಡ:

ಮುಂಗಾರು ಮಳೆಯ ತೀವ್ರ ಕೊರತೆಯಿಂದ ಬರದ ಛಾಯೆ ಎಲ್ಲೆಡೆ ಆವರಿಸಿದ್ದು ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಇದಕ್ಕೆ ಪೂರಕವೆಂಬಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು 2.88 ಲಕ್ಷ (ಶೇ.95) ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಜಿಲ್ಲೆಯ 8 ತಾಲೂಕುಗಳಲ್ಲಿ 2,71,417 ಹೆಕ್ಟೇರ್‌ ಪ್ರದೇಶ ಕೃಷಿ ಹಾಗೂ 16,659 ಹೆಕ್ಟೇರ್‌ ಪ್ರದೇಶ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಹಾನಿ:

ಧಾರವಾಡ ತಾಲೂಕಿನಲ್ಲಿ 55,869 ಹೆಕ್ಟೇರ್‌ ಪ್ರದೇಶ ಕೃಷಿ ಹಾಗೂ 2658 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿ ಸೇರಿ ಒಟ್ಟು 58,527 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಳ್ನಾವರ ತಾಲೂಕಿನಲ್ಲಿ 5,128, ಕಲಘಟಗಿ ತಾಲೂಕಿನಲ್ಲಿ 35,650 ಹೆಕ್ಟೇರ್‌ ಪ್ರದೇಶ ಕೃಷಿ ಹಾಗೂ 218 ಹೆಕ್ಟೇರ್‌ ಪ್ರದೇಶ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಕುಂದಗೋಳದಲ್ಲಿ 49,957 ಹೆಕ್ಟೇರ್‌ ಪ್ರದೇಶ ಕೃಷಿ ಹಾಗೂ 5821 ಹೆಕ್ಟೇರ್‌ ಪ್ರದೇಶ ತೋಟಗಾರಿಕಾ ಬೆಳೆ, ಅಣ್ಣಿಗೇರಿ ತಾಲೂಕಿನಲ್ಲಿ 27,348 ಹೆಕ್ಟೇರ್‌ ಪ್ರದೇಶ ಕೃಷಿ ಹಾಗೂ 2762 ಹೆಕ್ಟೇರ್‌ ತೋಟಗಾರಿಕಾ ಬೆಳೆ, ನವಲಗುಂದ ತಾಲೂಕಿನಲ್ಲಿ 54,870 ಹೆಕ್ಟೇರ್‌ನಲ್ಲಿ ಕೃಷಿ ಹಾಗೂ 3558 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ, ಹುಬ್ಬಳ್ಳಿ ತಾಲೂಕಿನಲ್ಲಿ 36,231 ಹೆಕ್ಟೇರ್‌ನಲ್ಲಿ ಕೃಷಿ ಹಾಗೂ 1586 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 6362 ಹೆಕ್ಟೇರ್‌ನಲ್ಲಿ ಕೃಷಿ ಹಾಗೂ 54 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ ಸೇರಿ ಒಟ್ಟು 6,417 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ತಲುಪಿದೆ.

ತಾಲೂಕುವಾರು ವರದಿ:

ಸರ್ಕಾರದ ನಿರ್ದೇಶನದಂತೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಂದ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕೈಗೊಂಡು ಅಂದಾಜು ಬೆಳೆ ಹಾನಿಯಾದ ಕುರಿತು ಸರ್ಕಾರಕ್ಕೆ ತಾಲೂಕುವಾರು ಪ್ರಸ್ತಾವನೆ ಸಲ್ಲಿಸಲಾಗಿದೆ. ಬರದ ಕ್ರಮವಾಗಿ ಜಿಲ್ಲೆಯಲ್ಲಿ ಮುಂದಿನ 35 ವಾರಗಳಷ್ಟು ಮೇವು ಸಾಕಾಗಲಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ 7 ಮೇವು ಬ್ಯಾಂಕ್‌ ತೆರೆಯಲು ಸ್ಥಳ ಗುರುತಿಸಲಾಗಿದೆ. ಜಿಲ್ಲೆಯ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಕ್ತ ಕ್ರಮಕೈಗೊಳ್ಳಲಿದೆ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.ಪರಿಹಾರ ನೀಡಲು ಸರ್ಕಾರ ಕ್ರಮ

ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ಕ್ರಮಕೈಗೊಳ್ಳುತ್ತಿದ್ದು, ರೈತರು ತಮ್ಮ ಪ್ರತಿ ಸರ್ವೇ ನಂಬರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ ಎಫ್‌ಐಡಿ ಪಡೆಯುವುದು ಕಡ್ಡಾಯ. ರೈತರು ತಮ್ಮ ಸರ್ವೇ ನಂಬರ್‌ನಲ್ಲಿ ಬೆಳೆದ ಬೆಳೆಯು ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ದಾಖಲಾಗಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಬೆಳೆ ಸಮೀಕ್ಷೆಯಾಗದಿದ್ದಲ್ಲಿ ವಾರದೊಳಗಾಗಿ ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳನ್ನು ಸಂಪರ್ಕಿಸಬೇಕು.

17 ಗ್ರಾಮದಲ್ಲಿ ನೀರಿನ ಬವಣೆ

ಪ್ರಸ್ತುತ ಜಿಲ್ಲೆಯ ಮೂರು ತಾಲೂಕಿನ ಗ್ರಾಮೀಣ ಪ್ರದೇಶದ 17 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, 19 ಖಾಸಗಿ ಕೊಳವೆಬಾವಿ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭ ಜಲಾಶಯದಿಂದ ಕಾಲುವೆಗಳ ಮುಖಾಂತರ 55 ಕುಡಿಯುವ ನೀರಿನ ಕೆರೆಗಳನ್ನು ಆಗಸ್ಟ್‌ ತಿಂಗಳಿನಲ್ಲಿ ಭರ್ತಿ ಮಾಡಿಕೊಂಡಿದ್ದು ನವೆಂಬರ್ ಅಂತ್ಯದ ವರೆಗೆ ನಿರ್ವಹಣೆ ಮಾಡಬಹುದು. ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿರುವ 100 ವಾರ್ಡ್‌ಗಳಿದ್ದು ಪ್ರತಿ ದಿನ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಹು-ಧಾ ಮಹಾನಗರದ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಲ್ಲಿ ನಿರಂತರ ನೀರು ಪೊರೈಕೆಯಾಗುತ್ತಿದೆ. ಉಳಿದೆಡೆ 2ರಿಂದ 6 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ.