ವಿದ್ಯಾನಗರ, ತುಮಾಟಿ ಲೇಔಟ್‌ನಲ್ಲಿ 2 ಬ್ಲಾಕ್ ಸ್ಪಾಟ್ ಕೇಂದ್ರ

| Published : Jun 29 2024, 12:32 AM IST

ಸಾರಾಂಶ

ಜಗಳೂರು ಪಟ್ಟಣದಲ್ಲಿ ಒಣ ಕಸದಿಂದ ಗೊಬ್ಬರ ತಯಾರಿಸುವ ಸಲುವಾಗಿ ವಿದ್ಯಾನಗರ ಮತ್ತು ತುಮಾಟಿ ಲೇಔಟ್‌ನಲ್ಲಿ ಪ್ರಾಯೋಗಿಕವಾಗಿ 2 ಬ್ಲಾಕ್ ಸ್ಪಾಟ್ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ.ಪಂ.ನ ೧೮ ವಾರ್ಡ್‌ಗಳಲ್ಲಿಯೂ ವಿಸ್ತರಣೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ ಹೇಳಿದ್ದಾರೆ.

- ಒಣಕಸ ಗೊಬ್ಬರ ತಯಾರಿಕೆ ಜಾಗೃತಿ ಮೂಡಿಸಿ ಪಪಂ ಮುಖ್ಯಾಧಿಕಾರಿ ಹೇಳಿಕೆ - - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಒಣ ಕಸದಿಂದ ಗೊಬ್ಬರ ತಯಾರಿಸುವ ಸಲುವಾಗಿ ವಿದ್ಯಾನಗರ ಮತ್ತು ತುಮಾಟಿ ಲೇಔಟ್‌ನಲ್ಲಿ ಪ್ರಾಯೋಗಿಕವಾಗಿ 2 ಬ್ಲಾಕ್ ಸ್ಪಾಟ್ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ.ಪಂ.ನ ೧೮ ವಾರ್ಡ್‌ಗಳಲ್ಲಿಯೂ ವಿಸ್ತರಣೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ ಹೇಳಿದರು.

ಪಟ್ಟಣದ ತುಮಾಟಿ ಲೇಔಟ್‌ನಲ್ಲಿ ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ಯೋಜನೆ ನಿಯಮಾವಳಿಯಂತೆ ಬ್ಲಾಕ್ ಸ್ಪಾಟ್‌ ಕೇಂದ್ರ ಕುರಿತು ಜಾಗೃತಿ ಮೂಡಿಸಿದ ನಂತರ ಮಾತನಾಡಿದ ಅವರು, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ಪರಿಸರಕ್ಕೆ ಹಾಲಿಯಾಗಲಿದೆ. ಹಾಗಾಗಿ, ಇಲಾಖೆ ವತಿಯಿಂದ ಬರುವಂಥ ವಾಹನಗಳಿಗೆ ಕಸವನ್ನು ವಿಂಗಡಣೆ ಮಾಡಿ, ವಿತರಿಸುವಂತಹ ಕೆಲಸ ಮಾಡಬೇಕು. ನಾವು ಹಲವಾರು ಬಾರಿ ಹೇಳಿದರೂ ಕಸ ವಿಂಗಡಣೆ ಮಾಡದೇ ಹಾಗೆಯೇ ನೀಡುತ್ತಿರುವುದು ಕಂಡುಬರುತ್ತಿದೆ ಎಂದರು.

ಜಿಲ್ಲಾಧಿಕಾರಿ ಆದೇಶದಂತೆ ಪಟ್ಟಣದ ವಿದ್ಯಾನಗರ ಮತ್ತು ತುಮಾಟಿ ಲೇಔಟ್‌ನಲ್ಲಿ ಬ್ಲಾಕ್ ಸ್ಪಾಕ್ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಉದ್ದೇಶ ಸಾರ್ವಜನಿಕರು ನೀಡುವ ಒಣ ಕಸವನ್ನು ವಾರ್ಡ್‌ನಲ್ಲಿ ತೊಟ್ಟಿಯನ್ನು ನಿರ್ಮಿಸಿ, ಒಣಕಸ ಶೇಖರಣೆ ಮಾಡಿ, ಗೊಬ್ಬರವನ್ನು ತಯಾರಿಸಿ ಆ ಗೊಬ್ಬರ ಉಚಿತವಾಗಿ ಬಡಾವಣೆಯ ನಿವಾಸಿಗಳಿಗೆ ವಿತರಿಸಲಾಗುವುದು. ಆ ಗೊಬ್ಬರವನ್ನು ಹೂವಿನ ಕುಂಡಗಳಿಗೆ ಹಾಕಿಕೊಳ್ಳಬಹುದು. ಹಾಗಾಗಿ, ಪ್ರತಿಯೊಬ್ಬರು ಕಸದಿಂದ ರಸ ತೆಗೆಯುವಂತಹ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಆರೋಗ್ಯ ನಿರೀಕ್ಷಕ ಪ್ರಶಾಂತ್, ಸದಸ್ಯರಾದ ಲಲಿತಮ್ಮ, ಮುಖಂಡರಾದ ಶಿವಣ್ಣ, ರವಿಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

- - - -28ಜೆಜಿಎಲ್2:

ಜಗಳೂರು ಪಟ್ಟಣದ ತುಮಾಟಿ ಲೇಔಟ್‌ನಲ್ಲಿ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ಯೋಜನೆ ನಿಯಮಾವಳಿಯಂತೆ ಬ್ಲಾಕ್ ಸ್ಟಾಕ್ ಕೇಂದ್ರ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ್ ಮಾತನಾಡಿದರು.