ಸಾರಾಂಶ
ಕೆಎಂಇಆರ್‌ಸಿ ಅನುದಾನದಲ್ಲಿ ಶೀಘ್ರದಲ್ಲಿ ಯೋಜನೆ ಕಾರ್ಯಗತ
೯೮ ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ ಶಾಸಕಿಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ನಾರಿಹಳ್ಳ ಜಲಾಶಯದಿಂದ ಕೋಡಾಲು ಸೇರಿದಂತೆ ಇತರೆ ೩೨ ಗ್ರಾಮಗಳಿಗೆ ಬಹುಗ್ರಾಮ ಯೋಜನೆ ಅಡಿಯಲ್ಲಿ ₹೮೯.೬೪ ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸೇರಿದಂತೆ ಒಟ್ಟು ₹೯೮ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಶುಕ್ರವಾರ ಚಾಲನೆ ನೀಡಿದರು.ಭೂಮಿಪೂಜೆ ನೆರವೇರಿಸಲಾದ ಕಾಮಗಾರಿಗಳು:
₹೪.೪೩ ಕೋಟಿ ವೆಚ್ಚದಲ್ಲಿ ವಿಠಲಾಪುರ ಗ್ರಾಮದಿಂದ ಡಿ. ಅಂತಾಪುರದವರೆಗಿನ ರಸ್ತೆ ಅಭಿವೃದ್ಧಿ, ವಿಠಲಾಪುರ ಗ್ರಾಮದಿಂದ ತುಮಟಿ ಗ್ರಾಮದವರೆಗೆ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ, ₹೭೫ ಲಕ್ಷ ವೆಚ್ಚದಲ್ಲಿ ತುಮಟಿ ತಾಂಡಾದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ರಾಜಾಪುರ ಗ್ರಾಮದಲ್ಲಿ ₹೭೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ₹೩೩.೦೬ ಲಕ್ಷ ವೆಚ್ಚದಲ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ 2 ಕೊಠಡಿಗಳ ನಿರ್ಮಾಣ ಕಾಮಗಾರಿ, ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಎನ್‌ಎಂಡಿಸಿ ಸಿಎಸ್‌ಆರ್ ಅನುದಾನ ರಂಗ ಮಂದಿರ ನಿರ್ಮಾಣ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ, ಉಬ್ಬಲಗಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ₹೨೯ ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ₹೭೫ ಲಕ್ಷ ವೆಚ್ಚದಲ್ಲಿ ಮಾಳಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ.ಉದ್ಘಾಟನೆಗೊಂಡ ಕಾಮಗಾರಿಗಳು:
ಎಂ. ಗಂಗಲಾಪುರ ಗ್ರಾಮದಲ್ಲಿ ₹೨೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ, ₹೮೧.೭೬ ಲಕ್ಷ ವೆಚ್ಚದಲ್ಲಿ ಮೆಟ್ರಿಕಿ ಗ್ರಾಮದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ, ಗ್ರಾಪಂ ಅನುದಾನದಲ್ಲಿ ರಾಜಾಪುರ ಗ್ರಾಮದಲ್ಲಿ ನಿರ್ಮಾಣಗೊಂಡ ಗ್ರಂಥಾಲಯದ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.ಡಿ. ಅಂತಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಯ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಕೋಡಾಲು, ಅಂತಾಪುರ ಭಾಗದಲ್ಲಿ ಫ್ಲೋರೈಡ್‌ಯುಕ್ತ ನೀರು ಪೂರೈಕೆಯಿಂದ ಉಂಟಾಗುತ್ತಿದ್ದ ತೊಂದರೆ ಅರಿತು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಸಂಸದ ಈ. ತುಕಾರಾಂ ಅವರ ಪ್ರಯುತ್ನದ ಫಲವಾಗಿ ₹೮೯.೬೪ ಕೋಟಿ ವೆಚ್ಚದಲ್ಲಿ ಈ ಭಾಗದ ೩೩ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಈಡೇರಿದೆ. ₹೧೫೦ ಕೋಟಿ ವೆಚ್ಚದಲ್ಲಿ ನಿಡಗುರ್ತಿ ಸೇರಿದಂತೆ ಸುತ್ತಲಿನ ೬೨ ಗ್ರಾಮಗಳಿಗೆ, ₹೧೨೫ ಕೋಟಿ ವೆಚ್ಚದಲ್ಲಿ ತೋರಣಗಲ್ಲು ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಹಾಗೂ ೬೦ ಕೋಟಿ ವೆಚ್ಚದಲ್ಲಿ ಸಂಡೂರು ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಜನತೆ ಈ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು. ನೀರನ್ನು ಜನತೆ ಹಿತಮಿತವಾಗಿ ಬಳಸಬೇಕು. ಮುಂದಿನ ಜನಾಂಗಕ್ಕೂ ಶುದ್ಧ ನೀರನ್ನು ಉಳಿಸಬೇಕಿದೆ. ದಿ. ಎಂ.ವೈ. ಘೋರ್ಪಡೆಯವರು ತಾಲೂಕಿನ ವಿವಿಧೆಡೆ ಕೆರೆ ನಿರ್ಮಿಸಿದ್ದಾರೆ. ಸಂತೋಷ್ ಲಾಡ್ ಹಾಗೂ ಸಂಸದ ಈ. ತುಕಾರಾಂ ತಾಲೂಕಿನ ವಿವಿಧೆಡೆ ಚೆಕ್‌ಡ್ಯಾಂ, ಕೃಷಿ ಹೊಂಡಗಳ ನಿರ್ಮಾಣಕ್ಕೆ ಕ್ರಮಕೈಗೊಂಡ ಹಿನ್ನೆಲೆ ಅಂತರ್ಜಲದ ಪ್ರಮಾಣ ಹೆಚ್ಚಿದೆ. ಕೆಎಂಇಆರ್‌ಸಿ ಅನುದಾನದಲ್ಲಿ ಜಾನುವಾರು ಸಾಕುವ ಆಸಕ್ತಿಯುಳ್ಳವರಿಗೆ ಪ್ರತಿ ಮನೆಗೆ 2 ಹಸು ನೀಡಲಾಗುವುದು. ಮಹಿಳೆಯರಿಗೆ ಸ್ವಾವಲಂಬನೆಯ ಜೀವನ ಕಲ್ಪಿಸಲು ಯೋಜಿಸಲಾಗಿದ್ದು, ಶೀಘ್ರದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು.ಜಿಪಂ ಮಾಜಿ ಸದಸ್ಯ ಟಿ. ಲಕ್ಷ್ಮಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಮಡಗಿನ ಬಸಪ್ಪ, ಗ್ರಾಪಂ ಅಧ್ಯಕ್ಷ ಎನ್. ಹೊನ್ನೂರಸ್ವಾಮಿ, ಉಪಾಧ್ಯಕ್ಷೆ ಹನುಮಕ್ಕ ರೇವಣ್ಣ, ಸದಸ್ಯರಾದ ಚಂದ್ರಪ್ಪ, ಗಂಗಾಧರ, ಯೋಗರಾಜ್, ರಾಮಪ್ಪ, ಪಿಡಿಒಗಳಾದ ರಂಗಪ್ಪ, ಗಂಗಾಧರ, ಮುಖಂಡರಾದ ದಮ್ಮೂರಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಆಶಾಲತಾ ಸೋಮಪ್ಪ, ಯು. ರಾಜಾಪುರ ಗ್ರಾಪಂ ಅಧ್ಯಕ್ಷ ನಾಗೇಶ್, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.