ಸಾರಾಂಶ
ಬಿರುಗಾಳಿ-ಮಳೆಗೆ ಧರೆಗೆ ಉರುಳಿದ ಮರಗಳು, ಜನಜೀವನ ಅಸ್ತವ್ಯಸ್ತ
ಕನ್ನಡಪ್ರಭ ವಾರ್ತೆ ಕೂಡ್ಲಿಗಿತಾಲೂಕಿನ ಕಾನಹೊಸಹಳ್ಳಿ ಮತ್ತು ಗುಡೇಕೋಟೆ ಹೋಬಳಿಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯಿಂದ ರಾತ್ರಿ 8ರವರೆಗೂ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿಯುಂಟಾಗಿದ್ದು, ಸೂಲದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 2 ಹಸುಗಳು ಸಾವನ್ನಪ್ಪಿವೆ. ಭಾರೀ ಬಿರುಗಾಳಿಗೆ ಮರಗಿಡಗಳು ಧರೆಗೆ ಉರುಳಿ ಬಿದ್ದು ಸಂಚಾರಕ್ಕೆ ಆಡಚಣೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.ತಾಲೂಕಿನ ಕಾನಹೊಸಹಳ್ಳಿ, ಗುಡೇಕೊಟೆ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿ, ಕುರಿಹಟ್ಟಿ, ಭೀಮಸಮುದ್ರ, ಮಾಕನಡಕು, ಕಡೇಕೊಳ್ಳ, ಕರಡಿಹಳ್ಳಿ, ನೆಲಬೊಮ್ಮನಹಳ್ಳಿ, ಎಂ.ಬಿ. ಅಯ್ಯನಹಳ್ಳಿ, ಹುಡೇಂ, ತಾಯಕನಹಳ್ಳಿ, ಹುರುಳಿಹಾಳ್, ಕಾನಹೊಸಹಳ್ಳಿ, ಬಣವಿಕಲ್ಲು, ಸೂಲದಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಿಡಿಲು ಆರ್ಭಟದೊಂದಿಗೆ ಮಳೆಯಾಗಿದೆ. ಸೂಲದಹಳ್ಳಿ ಗ್ರಾಮದಲ್ಲಿ ಹನುಮಕ್ಕ ಎಂಬವರಿಗೆ ಸೇರಿದ 2 ಹಸುಗಳು ಸಿಡಿಲಿಗೆ ಬಲಿಯಾಗಿವೆ. ಮನೆಯ ಮುಂದೆ ಕಟ್ಟಿದ ಹಸುಗಳು ಸಿಡಿಲು ಬಡಿದು ಸಾವನ್ನಪ್ಪಿದ್ದಿಂದ ಗ್ರಾಮಸ್ಥರು ಹಸುಗಳನ್ನು ನೋಡಿ ಮಮ್ಮಲ ಮರುಗಿದರು.
ಬಿರುಗಾಳಿಗೆ ಚಿಕ್ಕಜೋಗಿಹಳ್ಳಿಯಲ್ಲಿ ಶಾಂತವೀರಮ್ಮ ಎಂಬುವರ ವಾಸದ ಮನೆಯ ಮೇಲೆ ಮರವೊಂದು ಬಿದ್ದು, ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸರ್ಕಾರಿ ಬಾಲಕರ ಪ್ರೌಢಶಾಲೆಯ ಕೊಠಡಿಯ ಮೇಲೆ ಮರವೊಂದು ಉರುಳಿ ಬಿದ್ದು ಕಟ್ಟಡ ಜಖಂ ಅಗಿದೆ. ಬಿಸಿಎಂ ಹಾಸ್ಟಲ್ ಆವರಣದಲ್ಲಿ ಮರಗಳು ಮುರಿದು ಬಿದ್ದಿವೆ. ಗ್ರಾಮದಿಂದ ಗುಂಡುಮುಣುಗು ಹೋಗುವ ರಸ್ತೆಗೆ ಅಡ್ಡಲಾಗಿ ಮರ ಮುರಿದು ಬಿದ್ದು ವಾಹನ ಸಂಚಾರ ಅಡಚಣೆಯಾಗಿದೆ. ಕುರಿಹಟ್ಟಿ, ಭೀಮಸಮುದ್ರದಲ್ಲಿ ಬಿರುಗಾಳಿಗೆ ಹತ್ತಾರು ವಿಳೇದೆಲೆ ತೋಟಗಳು ನೆಲಕ್ಕೆ ಉರುಳಿ ಅಪಾರ ನಷ್ಟವಾಗಿದೆ.