ತಾಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿರುವ ಸದಸ್ಯರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಕಳೆದ ವರ್ಷ ಸುಮಾರು 2 ಕೋಟಿಯಷ್ಟು ವಿವಿಧ ಯೋಜನೆಗಳಲ್ಲಿ ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಆದ ಸಿ.ವಿ.ಮಹಲಿಂಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿರುವ ಸದಸ್ಯರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಕಳೆದ ವರ್ಷ ಸುಮಾರು 2 ಕೋಟಿಯಷ್ಟು ವಿವಿಧ ಯೋಜನೆಗಳಲ್ಲಿ ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಆದ ಸಿ.ವಿ.ಮಹಲಿಂಗಯ್ಯ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನ ಸಭಾಂಗಣದಲ್ಲಿ ತಾಲೂಕಿನ ಹಾಲು ಉಪತ್ಪಾದಕರಿಗೆ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು. ಕಳೆದ 25-26 ನೇ ಸಾಲಿನಲ್ಲಿ ತಾಲೂಕಿನಲ್ಲಿ ಹಾಲು ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿದ್ದ 85 ಸದಸ್ಯರು ಮೃತಪಟ್ಟಿದ್ದರು ಅವರ ಕುಟುಂಬಕ್ಕೆ ತಲಾ 50 ಸಾವಿರ ರು.ಗಳಂತೆ 42.50 ಲಕ್ಷ ರು.ಗಳನ್ನು ನೀಡಲಾಗಿದೆ. ವೈದ್ಯಕೀಯ ವೆಚ್ಚವಾಗಿ 18 ಮಂದಿಗೆ 3.60 ಲಕ್ಷ ನೀಡಲಾಗಿದೆ. 64 ಪಡ್ಡೆ ಹಸುಗಳು ಮೃತಪಟ್ಟಿದ್ದವು. ಅವುಗಳಿಗೆ ತಲಾ 10 ಸಾವಿರದಂತೆ 6.40 ಲಕ್ಷ ರು.ಗಳನ್ನು ಅದರ ಮಾಲೀಕರಿಗೆ ನೀಡಲಾಗಿದೆ. 9 ಹುಲ್ಲಿನ ಬಣವೆಗಳು ಸುಟ್ಟು ಹೋಗಿದ್ದು ತಲಾ 10 ಸಾವಿರದಂತೆ 90 ಸಾವಿರ ರು. ನೀಡಲಾಗಿದೆ. ಸುಮಾರು 115 ವಿದ್ಯಾರ್ಥಿಗಳಿಗೆ 17.25 ಲಕ್ಷ ವಿದ್ಯಾರ್ಥಿ ವೇತನವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು. ತಾಲೂಕಿನಲ್ಲಿ 261 ರಾಸುಗಳು ಮೃತಪಟ್ಟಿವೆ. ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿಹಾರ ಧನ ನಿರ್ಧರಿಸಲಾಗುವುದು. ಸರಾಸರಿ 50 ಸಾವಿರದಂತೆ ಸುಮಾರು 1.30 ಕೋಟಿಯಷ್ಟು ವಿಮಾ ಹಣವನ್ನು ಹೈನುಗಾರರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು.ಈ ಪ್ರಸಕ್ತ ವರ್ಷದಲ್ಲಿ ಪ್ರತಿ ತಿಂಗಳೂ ಪರಿಹಾರದ ಚೆಕ್ ನೀಡಲಾಗುತ್ತಿದೆ. ಈ ದಿನ ಏಳು ಮಂದಿ ಮೃತ ಸದಸ್ಯರ ಕುಟುಂಬಕ್ಕೆ 3.50 ಲಕ್ಷದ ಚೆಕ್ ನೀಡಲಾಗಿದೆ. 11 ಹಸುಗಳ ಮರಣಕ್ಕೆ 1.10 ಲಕ್ಷ, ಹುಲ್ಲಿನ ಬಣವೆ ಸುಟ್ಟ 6 ಪ್ರಕರಣಗಳಿಗೆ ಮತ್ತು 4 ಮರಣ ಹೊಂದಿದ ರಾಸುಗಳ ಮಾಲೀಕರಿಗೆ ವಿಮೆ ಹಣ ವಿತರಿಸಲಾಗಿದೆ ಎಂದರು. ಬರಗಾಲವಿರುವುದರಿಂದ ಮೇವಿನ ಬೀಜದ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಸುಮಾರು 25 ಕೋಟಿಯಷ್ಟು ಮೇವಿನ ಬೀಜದ ವಿತರಣಾ ಕಾರ್ಯ ನಡೆಯಲಿದೆ. ಬರಗಾಲ ಮತ್ತು ಖಾಸಗಿ ಡೈರಿಗಳ ಹಾವಳಿಯಿಂದ ಹೈನುಗಾರರನ್ನು ಪಾರು ಮಾಡಲು ಶೀಘ್ರದಲ್ಲೇ ರೈತರಿಗೆ ನೀಡಲಾಗುತ್ತಿರುವ ಹಾಲಿನ ದರವನ್ನು ಹೆಚ್ಚಳ ಮಾಡಲು ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಲಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು. ಈ ವೇಳೆ ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಸುನಿಲ್, ಡಾ.ಲೋಹಿತ್ ಸೇರಿದತೆ ಇತರರು ಇದ್ದರು.