ಪೊಲೀಸ್ ಮಕ್ಕಳ ವಸತಿ ಶಾಲೆ ಪುನರ್ ನಿರ್ಮಾಣಕ್ಕೆ ₹2 ಕೋಟಿ

| Published : Jan 07 2024, 01:30 AM IST

ಸಾರಾಂಶ

ಮನವಿಗೆ ಸ್ಪಂದಿಸಿದ ಸಚಿವ ಜೋಶಿ, ತಮ್ಮ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಸಿಎಸ್ಆರ್ ಅನುದಾನದ ಅಡಿ 2 ಕೋಟಿ ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದ ಏಕೈಕ (ಎನ್.ಎ. ಮುತ್ತಣ್ಣ ಸ್ಮಾರಕ) ಪೊಲೀಸ್ ಮಕ್ಕಳ ವಸತಿ ಶಾಲೆ ಮಕ್ಕಳ ವಸತಿ ನಿಲಯ ನಿರ್ಮಿಸಲು ಹಾಗೂ ಶಾಲೆ ಪುನರ್ ನಿರ್ಮಾಣ ಮಾಡಲು ಕೋಲ್ ಇಂಡಿಯಾ ಕಂಪನಿಯ ಸಿಎಸ್‌ಆರ್‌ ಅಡಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.

1997ರಲ್ಲಿ ಧಾರವಾಡದಲ್ಲಿ ಆರಂಭಗೊಂಡ ಈ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುತ್ತ ಬಂದಿತ್ತು. ಸದ್ಯ ಇಲ್ಲಿರುವ ವಸತಿ ನಿಲಯಗಳ ಕಟ್ಟಡ ಶಿಥಿಲಗೊಂಡಿದ್ದು ನೂತನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ್ ಕಳೆದ ತಿಂಗಳು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಚಿವ ಜೋಶಿ, ತಮ್ಮ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಸಿಎಸ್ಆರ್ ಅನುದಾನದ ಅಡಿ ₹2 ಕೋಟಿ ಮಂಜೂರು ಮಾಡಿದೆ.

2 ಹಂತದಲ್ಲಿ ಹಣ ಬಿಡುಗಡೆ ಮಾಡಲು ಒಡಂಬಡಿಕೆಯಾಗಿದ್ದು, ಮೊದಲ ಹಂತದಲ್ಲಿ ₹1 ಕೋಟಿ ಬಿಡುಗಡೆ ಮಾಡಿದ್ದಾರೆ. 2ನೇ ಹಂತದಲ್ಲಿ ಇನ್ನುಳಿದ ₹1 ಕೋಟಿ ಹಣ ಬಿಡುಗಡೆ ಮಾಡಲು ಒಡಂಬಡಿಕೆಯಲ್ಲಿ ತಿಳಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಅಗ್ನಿಶಾಮಕದಳ ಹಾಗೂ ಖಾಯಂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ (ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ತಲಾ 25 ವಿದ್ಯಾರ್ಥಿಗಳಿಗೆ) ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ.

ಮುತ್ತಣ್ಣ ವಸತಿ ಶಾಲೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ಧನಿದ್ದೇನೆ. ಈ ಶಾಲೆಯಲ್ಲಿನ ಮಕ್ಕಳ ಫಲಿತಾಂಶ ಉತ್ತಮವಾಗಿದೆ. ಶಾಲೆಯನ್ನು ಖಾಸಗಿ ಸಂಸ್ಥೆಗಳ ಆರ್ಥಿಕ ನೆರವಿನಿಂದ ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶ ನನಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ತಮ್ಮ ಕೋರಿಕೆಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಲು ಶ್ರಮವಹಿಸಿದ ಸಚಿವ ಜೋಶಿಗೆ ಶನಿವಾರ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್, ಎಸ್ಪಿ ಡಾ. ಗೋಪಾಲ ಬ್ಯಾಕೊಡ್ ಅವರು ತಮ್ಮ ಇನ್ನಿತರ ಅಧಿಕಾರಿಗಳೊಂದಿಗೆ ಸಂಸದರ ಕಚೇರಿಗೆ ಆಗಮಿಸಿ ಧನ್ಯವಾದ ಹೇಳಿದ್ದಾರೆ.