ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿರಬಕವಿಯಿಂದ ರಾಮಪುರ ಮಾರ್ಗವಾಗಿ ಬನಹಟ್ಟಿಗೆ ತೆರಳುವ ರಾಜ್ಯ ಹೆದ್ದಾರಿಗೆ ಸೇರಿದ ಸುಮಾರು ೧.೪ ಕಿಮೀ ಉದ್ದದ ರಸ್ತೆ ಕಾಮಗಾರಿಗೆ ಕಳೆದ ೨೨ತಿಂಗಳ ಹಿಂದೆ ಭೂಮಿಪೂಜೆ ನೆರವೇರಿತ್ತು. ಕಾಮಗಾರಿ ಆದೇಶಪತ್ರ ಪಡೆದು ಎರಡು ಬಾರಿ ನೀತಿಸಂಹಿತೆ ಬಳಿಕ ಬಂದ ನೂತನ ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ₹೨ಕೋಟಿ ಮೊತ್ತ ಸ್ಥಗಿತಗೊಂಡ ಕಾರಣ ಕಾಮಗಾರಿ ಚಾಲನೆಗೊಂಡಿರಲಿಲ್ಲ. ಬಳಿಕ ಶಾಸಕ ಸಿದ್ದು ಸವದಿ ಹೋರಾಟದ ಫಲವಾಗಿ ಹಿಂದಿನ ಸರ್ಕಾರದಲ್ಲಿ ಮಂಜೂರಾತಿ ಪಡೆದು ಅನುದಾನ ಬಿಡುಗಡೆಯಾಗಿದ್ದರೂ ಹೊಸ ಸರ್ಕಾರ ನಿಲ್ಲಿಸಿದ್ದ ಕಾಮಗಾರಿ ನಡೆಸಲೇಬೇಕೆಂದು ಬಿಗಿಪಟ್ಟು ಹಿಡಿದಾಗ ಮೊದಲಿನ ಅನುದಾನ ದೊರೆಯಿತಾದರೂ ಮತ್ತೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣ ಕೆಲಸಕ್ಕೆ ವಕ್ರದೃಷ್ಟಿ ಬಿತ್ತು.
ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಗುತ್ತಿಗೆದಾರ ಕಿರಣ ಕಂಕಾಳೆ ನಿಯಮಾನುಸಾರ ಕಾಮಗಾರಿ ಆರಂಭಿಸಿ ಮೆಟ್ಲಿಂಗ್, ಚರಂಡಿ ಕಾಮಗಾರಿ ಪೂರೈಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯುತ್ತದೆ ಎಂದು ಹೇಳಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರು ಇದುವರೆಗೆ ಕಾಮಗಾರಿ ಪೂರ್ಣಗೊಳಿಸದ್ದರಿಂದ ರಸ್ತೆ ಕೆಸರು ಗದ್ದೆಯಂತಾಗಿದೆ.ಭರಪೂರ ಮಳೆಯಾದರೆ ಭತ್ತದ ಗದ್ದೆಯಂತೆ, ಕೊಂಚ ಮಳೆಯಾದರೆ ಜಾರುಬಂಡೆಯಾಗಿ ಮತ್ತು ಬಿಸಿಲಲ್ಲಿ ಧೂಳು ಹಿಡಿಯುತ್ತದೆ. ಈ ರಸ್ತೆಯ ಎರಡೂ ಬದಿಯ ಅಂಗಡಿ, ಮನೆ ಮತ್ತು ವಾಹನ ಸಂಚಾರರಿಗೆ ಈ ರಸ್ತೆಯಿಂದಾಗಿ ನೆಮ್ಮೆದಿಯೇ ಇಲ್ಲದಂತಾಗಿದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಧೂಳು ಮನೆಯನ್ನೇ ಆವರಿಸಿಕೊಂಡಿರುತ್ತದೆ. ಜೂನ್-೨೧ ಹಾಗೂ ಜು.೧೨ರಂದು ಸಚಿತ್ರ ವರದಿ ಪ್ರಕಟಿಸಿದ್ದ ಕನ್ನಡಪ್ರಭ ವರದಿ ಬಳಿಕ ಕಾಮಗಾರಿ ಚುರುಕಾಗಿ ಸಾಗಿ ಮೆಟ್ಲಿಂಗ್, ಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯುದ್ದಕ್ಕೂ ದಪ್ಪ ಖಡಿ ಹಾಕಿ ಒಂದೆರಡು ದಿನ ರೋಲರ್ ಆಡಿಸಿ ಗುತ್ತಿಗೆದಾರ ಮತ್ತೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ.
ಸರ್ಕಾರಿ ಇಲಾಖೆಯಲ್ಲೇ ಎಲ್ಲ ದಾಖಲೆಗಳು ಇರುತ್ತವೆ. ಅವುಗಳನ್ನು ಬಳಸಿಕೊಂಡು ಕಾಮಗಾರಿ ನಡೆಸಬೇಕೆಂಬ ಪ್ರಾಥಮಿಕ ಅರಿವೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಇಲ್ಲವೇ? ರಸ್ತೆಯ ಎರಡೂ ಬದಿಯಲ್ಲಿ ಸರಿಯಾದ ಮಾಪನವಿಲ್ಲದೇ ಬೇಕಾಬಿಟ್ಟಿಯಾಗಿ ನೇರ ರಸ್ತೆ ಮಾಡದೇ ನಾಲ್ಕು ಕಡೆ ಅಂಕು ಡೊಂಕಾಗಿ ರಸ್ತೆ ನಿರ್ಮಾಣ ಮಾಡಿದ್ದು, ಅಪೂರ್ಣ ಕಾಮಗಾರಿ ಮಾಡಿದ್ದರಿಂದ ಮುಖ್ಯ ರಸ್ತೆಯ ಬದಿಯ ಮನೆ ನಿವಾಸಿಗಳು, ಅಂಗಡಿಕಾರರು, ಶಾಲೆಗಳು ಧೂಳಿನಿಂದ ಕಂಗಾಲಾಗಿದ್ದಾರೆ.ಲೋಕಕಂಟಕವಾಗಿ ಪರಿಣಮಿಸಿದ ಲೋಕೋಪಯೋಗಿ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಇದ್ದಲ್ಲಿ, ಇಲ್ಲವೇ ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಬಂದು ಪರಿಶೀಲಿಸಿ ಪೂರ್ಣಗೊಳಿಸದೇ ಬಿಟ್ಟ ಕಾರಣ ರಸ್ತೆ ಅವ್ಯವಸ್ಥೆಯ ಆಗರವಾಗುತ್ತಿದೆ. ಮೆಟ್ಲಿಂಗ್ ಕಾಮಗಾರಿಯೂ ಕಿತ್ತು ಬರುತ್ತಿದೆ. ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದೇ ನಾಗರಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಮತ್ತು ಅವಧಿ ಮುಗಿದರೂ ಕಾಮಗಾರಿ ಮುಗಿಯದ ಬಗ್ಗೆ ಎಡಬ್ಲ್ಯೂಇ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ, ಸತತ ಕಾಮಗಾರಿ ನಡೆಸಿ ಪೂರ್ಣಗೊಳಿಸಲು ಆದೇಶಿಸಬೇಕೆಂದು ಬೇಸತ್ತಿರುವ ನಾಗರಿಕರು ಆಗ್ರಹಿಸಿದ್ದಾರೆ.
ತಾಲೂಕಿನಾದ್ಯಂತ ಕಳೆದ ೨೦ ವರ್ಷಗಳಿಂದ ಉತ್ತಮ ರಸ್ತೆಗಳನ್ನು ಕಂಡಿದ್ದ ನಾಗರಿಕರು ಇದೀಗ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಕುಲಗೆಟ್ಟು ಹೋಗಿದ್ದರೂ ಸಂಬಂಧಿತ ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾದಿರುವುದನ್ನು ಖಂಡಿಸಿ ರಾಮಪೂರ ನಾಗರಿಕರೊಡನೆ ರಬಕವಿ-ಬನಹಟ್ಟಿ ಅಭಿವೃದ್ಧಿ ಸಮಿತಿ ಧುರೀಣರು ರಸ್ತೆ ಮೇಲೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.