ಕಾರ್ಮಿಕ ಭವನ ನಿರ್ಮಾಣಕ್ಕೆ 2 ರು.ಕೋಟಿ ಅನುದಾನ

| Published : Jan 20 2025, 01:34 AM IST

ಸಾರಾಂಶ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ರಾಜ್ಯ ಸರ್ಕಾರ ಉಚಿತವಾಗಿ ಟೂಲ್ ಕಿಟ್‌ ನೀಡುತ್ತಿದ್ದು, ಕಿಟ್‌ಗಳನ್ನು ಮಾರಾಟ ಮಾಡದೆ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಕಟ್ಟಡ ಮತ್ತು‌ ಇತರೆ ನಿರ್ಮಾಣ ಕಾರ್ಮಿಕರಿಗೆ ಕಿಟ್ ಸ್ವಯಂ ಉದ್ಯೋಗ ಕೈಗೊಳ್ಳಲು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಾರ್ಮಿಕರ ಹಿತ ದೃಷ್ಟಿಯಿಂದ ಶುಭ ಸಮಾರಂಭಗಳನ್ನು ನಡೆಸಲು ಅನುವಾಗುವಂತೆ ಬಂಗಾರಪೇಟೆ ಪಟ್ಟಣದಲ್ಲಿ ಎರಡು ಕೋಟಿ ರು.ಗಳ ವೆಚ್ಚದಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಟೂಲ್ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,

ಕಾರ್ಮಿಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕಿಯೆಯನ್ನು ಸಹ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು‌ ಆರಂಭಿಸಲಾಗುತ್ತದೆ ಎಂದರು

ಕಾರ್ಮಿಕರಿಗೆ ಟೂಲ್‌ ಕಿಟ್‌

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ರಾಜ್ಯ ಸರ್ಕಾರ ಉಚಿತವಾಗಿ ಟೂಲ್ ಕಿಟ್‌ ನೀಡುತ್ತಿದ್ದು, ಕಿಟ್‌ಗಳನ್ನು ಮಾರಾಟ ಮಾಡದೆ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಇದರ ಅಂಗವಾಗಿ ಕಟ್ಟಡ ಮತ್ತು‌ ಇತರೆ ನಿರ್ಮಾಣ ಕಾರ್ಮಿಕರಿಗೆ ಕಿಟ್ ಸ್ವಯಂ ಉದ್ಯೋಗ ಕೈಗೊಳ್ಳಲು ನೀಡಲಾಗಿದೆ ಎಂದರು.

ಎಲ್ಲ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಕಾಣಬೇಕು. ದೇಶದ ನಿರ್ಮಾಣ ಕಾರ್ಯದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಮಹತ್ತರವಾದದ್ದು. ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಅನಾರೋಗ್ಯ ಪೀಡಿತರಿಗೆ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು, ದೈಹಿಕ ಅಂಕವಿಕಲತೆ ಉಂಟಾದರೆ ಸಹಾಯ ಧನ ನೀಡಲಾಗುವುದು ಎಂದರು.

ವಸತಿರಹಿತರಿಗೆ ಮನೆ ನಿರ್ಮಾಣ

ಪಿಂಚಣಿ ಸೌಲಭ್ಯ ಹೀಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರೂ ಸಹ ವಿಮಾ ಸೌಲಭ್ಯವನ್ನು ಪಡೆಯಬೇಕು. ಈಗ ಹೊಸದಾಗಿ ಕಟ್ಟಡ ಮತ್ತು ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ, ಕಾರ್ಮಿಕ ಗೃಹ ನಿರ್ಮಾಣ ಎಂಬ ಇಲಾಖೆ ಮಾಡಲಾಗಿದೆ. ವಸತಿರಹಿತ ಕಾರ್ಮಿಕರಿಗೆ ಗೃಹ ನಿರ್ಮಾಣವನ್ನು ಮಾಡಿಕೊಡಲಾಗುವುದು. ಎಲ್ಲರೂ ಸಹ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ತಾಪಂ ಇಒ ರವಿಕುಮಾರ್, ಸರಕಾರಿ ನೌಕರ ಸಂಘದ ಅಧ್ಯಕ್ಷ ರವಿ, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಇನ್ಸ್‌ಪೆಕ್ಟರ್‌ ದಯಾನಂದ್ ಮುಂತಾದವರು ಹಾಜರಿದ್ದರು.