ಸಾರಾಂಶ
ರೈತ ಸಂಪರ್ಕ ಕೇಂದ್ರದ ಕಟ್ಟಡ ತಳಪಾಯಕ್ಕೆ ಚಾಲನೆ: ಗುಣಮಟ್ಟದ ಕಾಮಗಾರಿಗೆ ಸೂಚನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ₹2 ಕೋಟಿ ಮಂಜೂರಾಗಿದ್ದು ಇದರಲ್ಲಿ 1 ಕೋಟಿ ಬಿಡುಗಡೆಯಾಗಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಮಗದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ಕೃಷಿ ಇಲಾಖೆ ಆವರಣದಲ್ಲಿ ಅಂದಾಜು ₹2 ಕೋಟಿ ವೆಚ್ಚದ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡದ ತಳಪಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನಿರ್ಮಿತಿ ಕೇಂದ್ರದವರು ಈ ಕಟ್ಟಡ ನಿರ್ಮಿಸುತ್ತಿದ್ದು ಗುಣಮಟ್ಟದ ಕಟ್ಟಡ ಕಟ್ಟಬೇಕು ಎಂದು ಸೂಚಿಸಿದರು.ಕಡಹಿನಬೈಲು ಏತ ನೀರಾವರಿ ಯೋಜನೆಗೆ ಪೈಪ್ ಲೈನ್ ಹಾಗೂ ಕೆರೆ ಅಭಿವೃದ್ಧಿಗಾಗಿ ಹಿಂದಿನ ಬಜೆಟ್ ನಲ್ಲಿ ₹9 ಕೋಟಿ ಮೀಸಲಿಡ ಲಾಗಿತ್ತು.ಇದನ್ನು ₹15 ಕೋಟಿಗೆ ಏರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಗ್ರಾಮೀಣ ರಸ್ತೆಗಳಿಗೆ ₹10 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲೇ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ರಸ್ತೆಯ ಪಕ್ಕದ ಜಂಗಲ್ ಕ್ಲಿಯರ್ ಮಾಡಿಸಲಾಗುವುದು. ಕ್ಷೇತ್ರದಲ್ಲಿ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ತೀರ ಹಾಳಾದ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು. ಜಯಪುರ ಹಾಗೂ ಹರಿಹರಪುರದ ರಸ್ತೆ ಅಗಲೀಕರಣ ಕ್ಕಾಗಿ ₹4 ಕೋಟಿ ಮಂಜೂರಾಗಿದೆ. ನರಸಿಂಹರಾಜಪುರ ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕಾಗಿ ₹60 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಲ್ಲಿಸಿದ್ದಾರೆ. ಹಣ ಮಂಜೂರಾದ ನಂತರ ಕೆಲಸ ಪ್ರಾರಂಭಿಸಲಾಗುವುದು ಎಂದರು.
ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಜಾನಕೀರಾಂ ಮಾತನಾಡಿ, ನಾನು ಈ ಹಿಂದೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದಾಗ ಟಿಎಪಿಸಿಎಂನ ಕಟ್ಟಡದಲ್ಲಿ ಕಚೇರಿ ಮಾಡಿಕೊಳ್ಳಲಾಗಿತ್ತು. ಕೃಷಿ ಇಲಾಖೆಗೆ ಸೇರಿದ 2 ಎಕರೆ ಜಾಗ ಇದೆ ಎಂದು ನಂತರದ ವರ್ಷಗಳಲ್ಲಿ ಗೊತ್ತಾಯಿತು. ಆ ಜಾಗ ಒತ್ತುವರಿಯಾಗಿತ್ತು. ಇದರಲ್ಲಿ ಕೆಲವು ಜಾಗ ಬಿಡಿಸಲಾಗಿದೆ. ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಟಿ.ಡಿ. ರಾಜೇಗೌಡರು ₹2 ಕೋಟಿ ಮಂಜೂರು ಮಾಡಿಸಿರುವುದು ರೈತರಿಗೆ ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಅವರನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ನವೀನ್, ಖಜಾಂಚಿ ಚೇತನ್, ನಿರ್ದೇಶಕರಾದ ಎಚ್.ಎನ್.ರವಿಶಂಕರ್, ರಂಜಿತ, ಸುಪ್ರೀತ, ಶ್ರೀನಿವಾಸ ಗೌಡ, ವೈ.ಎಸ್.ರವಿ, ತಿಮ್ಮಯ್ಯ, ಎನ್.ಪಿ.ರಮೇಶ್, ಪಪಂ ಅಧ್ಯಕ್ಷೆ ಸುರೈಯಾಭಾನು, ಉಪಾಧ್ಯಕ್ಷೆ ಉಮಾ, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಇದ್ದರು.