ಜೆಎಸ್‌ಡಬ್ಲು ಫೌಂಡೇಶನ್‌ನಿಂದ ₹೨.೧೨ ಕೋಟಿ ವಿದ್ಯಾರ್ಥಿವೇತನ ಬಿಡುಗಡೆ

| Published : Jun 27 2024, 01:01 AM IST

ಜೆಎಸ್‌ಡಬ್ಲು ಫೌಂಡೇಶನ್‌ನಿಂದ ₹೨.೧೨ ಕೋಟಿ ವಿದ್ಯಾರ್ಥಿವೇತನ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಜೆಎಸ್‌ಡಬ್ಲು ಫೌಂಡೇಶನ್ ನೆರವಾಗುತ್ತಿರುವುದು ಶ್ಲಾಘನೀಯ.

ಸಂಡೂರು: ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಜೆಎಸ್‌ಡಬ್ಲು ಉಡಾನ್ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಅದರ ಅಂಗವಾಗಿ ಪ್ರಸಕ್ತ ಸಾಲಿನಲ್ಲಿ ೬೨೨ ವಿದ್ಯಾರ್ಥಿಗಳಿಗೆ ₹೨.೧೨ ಕೋಟಿ ಮೊತ್ತದ ವಿದ್ಯಾರ್ಥಿವೇತನವನ್ನು ಬುಧವಾರ ತಾಲೂಕಿನ ತೋರಣಗಲ್ಲಿನ ಓಪಿಜೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಜೆಎಸ್‌ಡಬ್ಲು ಫೌಂಡೇಶನ್ ನೆರವಾಗುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಆತ್ಮವಿಶ್ವಾಸದಿಂದ ತಮ್ಮ ಗುರಿಯನ್ನು ಸಾಧಿಸಬೇಕು ಎಂದರು.

ಜೆಎಸ್‌ಡಬ್ಲು ಸ್ಟೀಲ್ ಕಂಪನಿ ವಿಜಯನಗರ ಅಧ್ಯಕ್ಷ ಪಿ.ಕೆ. ಮುರುಗನ್ ಸ್ಕಾಲರ್‌ಶಿಪ್ ಚೆಕ್ ಬಿಡುಗಡೆಗೊಳಿಸಿದರು.

ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ನವತೆ ಮಾತನಾಡಿ, ಜೆಎಸ್‌ಡಬ್ಲು ಫೌಂಡೇಶನ್ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುತ್ತಿದೆ. ಉನ್ನತ ಶಿಕ್ಷಣ ಪಡೆಯುವ ಆಸಕ್ತಿ ಹೊಂದಿ, ಕಾಲೇಜು ಸೇರಿದ ತಕ್ಷಣ ಹಣ ಕಟ್ಟಲಾಗದೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದೆಂದು ಯೋಚಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಈ ವರ್ಷ ೬೨೨ ವಿದ್ಯಾರ್ಥಿಗಳಿಗೆ ₹೨.೧೨ ಕೋಟಿ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರಲ್ಲಿ ಐಟಿಐ, ಡಿಪ್ಲೋಮ, ಮೆಡಿಕಲ್, ಎಂಜಿನಿಯರಿಂಗ್, ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತಿತರ ಕೋರ್ಸ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಬಿಪಿಎಲ್ ಮತ್ತು ಕಡಿಮೆ ಆದಾಯ ಹೊಂದಿದ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಜೆಎಸ್‌ಡಬ್ಲು ಸ್ಟೀಲ್ ಕಂಪನಿ ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಉಪಾಧ್ಯಕ್ಷ ಸಂಜಯ್ ಹಂಡೂರ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸನ್, ಫೌಂಡೇಶನ್ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು.