ಸಾರಾಂಶ
ಸ್ಮಾರಕ ಭವನ ದುಸ್ಥಿತಿಯಲ್ಲಿರುವ ಬಗ್ಗೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಗಮನಸೆಳೆದಿದ್ದರು. ಇದೀಗ ಹಣ ಬಿಡುಗಡೆಗೆ ಆದೇಶ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧ ನವೀಕರಣಕ್ಕೆ 2 ಕೋಟಿ ರು. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.ಸ್ಮಾರಕ ಭವನ ದುಸ್ಥಿತಿಯಲ್ಲಿರುವ ಬಗ್ಗೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಗಮನಸೆಳೆದಿದ್ದರು. ಇದೀಗ ಹಣ ಬಿಡುಗಡೆಗೆ ಆದೇಶ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
1937ರಲ್ಲಿ ಶಿವಪುರದಲ್ಲಿ ಹೋರಾಟಗಾರರಾದ ಎನ್.ವೀರಣ್ಣ ಗೌಡ, ಕೊಪ್ಪದ ಜೋಗಿ ಗೌಡ, ಸಾಹುಕಾರ ಚೆನ್ನಯ್ಯ ನೇತೃತ್ವದಲ್ಲಿ ನಡೆದಿದ್ದ ಹೋರಾಟದ ನೆನಪಿಗೆ ಅಲ್ಲಿ ಸೌಧ ನಿರ್ಮಾಣ ಮಾಡಲಾಗಿತ್ತು. ಆದರೆ, ಸೌಧ ನಿರ್ವಹಣೆ ಇಲ್ಲದೇ ಹಾಳು ಬಿದ್ದಿದೆ. ಸ್ಮಾರಕದ ಒಳಗಿರುವ ಚಿತ್ರಪಟಗಳು ಹಾಳಾಗಿವೆ. ಉದ್ಯಾನವನ ನಿರ್ವಹಣೆ ಇಲ್ಲದೇ ಸೊರಗಿದೆ. ಸಂಗೀತ ಕಾರಂಜಿ ನೃತ್ಯ ನಿಲ್ಲಿಸಿ ತುಕ್ಕು ಹಿಡಿದಿದೆ. ಸ್ಮಾರಕ ಭವನದ ಒಳಗೆ ಧೂಳು ತುಂಬಿಕೊಂಡಿದೆ. ಭವನದ ಬಾಗಿಲು ಸದಾ ಹಾಕಿಕೊಂಡಿರುವುದರಿಂದ ಪ್ರವಾಸಿಗರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ದಿನೇಶ ಗೂಳಿಗೌಡ ಅವರು ಸಮಸ್ಯೆಯನ್ನು ವಿವರಿಸಿ ಸಿಎಂ ಅವರಿಗೆ ಸೆ.9 ರಂದು ಪತ್ರ ಬರೆದಿದ್ದರು.ಪತ್ರದಲ್ಲೇನಿತ್ತು..?
ಮದ್ದೂರು ತಾಲೂಕಿನ ಶಿವಪುರದ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧ ಜಿಲ್ಲೆಯ ಹೆಮ್ಮೆಯಾಗಿದೆ. ಮೈಸೂರು-ಬೆಂಗಳೂರು, ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಸ್ಮಾರಕವು ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿದೆ. ಆದರೆ, ಭವನ ಇಂದು ಹಾಳು ಕೊಂಪೆಯಾಗಿದೆ.ಹಾಗಾಗಿ ಸ್ಮಾರಕ ರಕ್ಷಣೆಗೆ ಕ್ರಮ ವಹಿಸಬೇಕು. ಕಟ್ಟಡ ದುರಸ್ತಿ ಮಾಡಿ, ಹರಿದ ಚಿತ್ರ ಪಟಗಳನ್ನು ಬದಲಿಸಬೇಕು. ಸ್ಮಾರಕ ಭವನ ನಿರ್ವಹಣೆಗೆ ಸಿಬ್ಬಂದಿ, ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಕಾಯಮಾಗಿ ಬಾಗಿಲು ತೆರೆದು ಪ್ರವಾಸಿಗರ, ವಿದ್ಯಾರ್ಥಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು.ಸ್ಮಾರಕದ ಉದ್ಯಾನವನ, ಸಂಗೀತ ಕಾರಂಜಿ ಪುನರುಜ್ಜೀವನ ಮಾಡಬೇಕು. ಇದಕ್ಕೆಲ್ಲ 2 ಕೊಟಿ ರು. ನೀಡುವಂತೆ ದಿನೇಶ ಗೂಳಿಗೌಡ ಅವರು ಸಿಎಂಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಹಣ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.