ಸೊಪ್ಪಿನ ಮಹತ್ವವನ್ನು ಪೋಷಕರು ಮಕ್ಕಳಿಗೆ ತಿಳಿಸಿಕೊಡಬೇಕು

| Published : Sep 08 2025, 01:00 AM IST

ಸಾರಾಂಶ

ಸೊಪ್ಪಿನ ಮೇಳದ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ 35 ಮಕ್ಕಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ಪೀಳಿಗೆಯ ಮಕ್ಕಳಿಗೆ ಬೆರಳೆಣೆಕೆಯಷ್ಟು ವಿದೇಶಿ ಸೊಪ್ಪು ಬಿಟ್ಟರೆ, ನಮ್ಮ ನೆಲದ ಸೊಪ್ಪುಗಳ ಪರಿಚಯವೇ ಇಲ್ಲ. ಪೋಷಕರು ತಮ್ಮ ಮಕ್ಕಳಿಗೆ ಸೊಪ್ಪಿನ ಸಂಸ್ಕೃತಿ, ವೈವಿಧ್ಯ ಮತ್ತು ಅಡುಗೆ ಪದ್ಧತಿಯನ್ನು ಪರಿಚಯಿಸಬೇಕು ಎಂದು ಅಜೀಂ ಪ್ರೇಮ್ ಜಿ ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಎಂ. ಶಿವಕುಮಾರ್ ತಿಳಿಸಿದರು.ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ, ಹುಲಿಕಾಡು ರೈತ ಉತ್ಪಾದಕರ ಕಂಪನಿ ಮತ್ತು ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸೊಪ್ಪು ಮೇಳದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಸೊಪ್ಪಿನ ಮೇಳದ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ 35 ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಾವು ಕಂಡ ಸೊಪ್ಪಿನ ಲೋಕವನ್ನು ಬಣ್ಣಗಳ ಮೂಲಕ ತೆರೆದಿಟ್ಟರು. ಸೊಪ್ಪಿನ ಚಿತ್ರಕಲಾ ಸ್ಪರ್ಧೆಯಲ್ಲಿ ಎಂ. ಪ್ರಣತಿ (ಪ್ರಥಮ), ಆದ್ಯ ಶ್ರೀವತ್ಸ (ದ್ವಿತೀಯ), ಬಿ. ಪುನರ್ದತ್ತ (ತೃತೀಯ), ಕೆ.ಎ. ಶಾರ್ವಿಕ ಮತ್ತು ಆರ್. ಕುಶಾಲ್ ( ಸಮಾಧಾನಕರ) ಬಹುಮಾನ ಗಳಿಸಿದರು. ಎಂ. ಶಿವಕುಮಾರ್ ಮತ್ತು ಸಹಜ ಕೃಷಿಕ ಶ್ರೀವತ್ಸ ಗೋವಿಂದರಾಜು ತೀರ್ಪುಗಾರರಾಗಿದ್ದರು.ಮೇಳದ ಅಂಗವಾಗಿ ಏರ್ಪಡಿಸಿದ್ದ ಸೊಪ್ಪಿನ ಅಡುಗೆ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 36 ಜನ ಸ್ಪರ್ಧಿಗಳು, ವಿವಿಧ ಬಗೆಯ ಸೊಪ್ಪಿನ ಅಡುಗೆಗಳನ್ನು ಸ್ಪರ್ಧೆಗೆ ತಂದಿದ್ದರು. ಎಸ್ ಡಿಎಂ ಕಾಲೇಜಿನ‌ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಪೂಜಾಶ್ರೀ ಮಾಡಿದ ಗರಿಕೆ ಹುಲ್ಲಿನ ಚಾಕಲೇಟ್ ಎಲ್ಲರ ಮೆಚ್ವುಗೆಗೆ ಪಾತ್ರವಾಯಿತು.‌ಪಾಲಕ್ ಪಕೋಡ, ದೊಡ್ಡ ಪತ್ರೆ ಪಲಾವ್, ಸಬ್ಬಸಿಗೆ ಪುರಿ ಉಂಡೆ, ಕುಂಬಳ ಸೊಪ್ಪಿನ ಸಾಂಬಾರ್, ಸೊಪ್ಪಿನ ರೊಟ್ಟಿ, ದೊಡ್ಡಪತ್ರೆ ಬಜ್ಜಿ... ಹೀಗೆ 100 ಹೆಚ್ಚು ಸೊಪ್ಪಿನ ಖಾದ್ಯಗಳನ್ನು ಸ್ಪರ್ಧೆಗೆ ತರಲಾಗಿತ್ತು.ಅಡುಗೆ ಸ್ಪರ್ಧೆಯಲ್ಲಿ ಪುಷ್ಪಾ ಪರಶುರಾಮ (ಪ್ರಥಮ), ಕೃಪಾಲಿನಿ (ದ್ವಿತೀಯ), ನಾಗಮಣಿ ವಿರೂಪಾಕ್ಷ (ತೃತೀಯ), ಶಿವಮ್ಮ ಮತ್ತು ಪೂಜಾಶ್ರೀ (ಸಮಾಧಾನಕರ ) ಬಹುಮಾನ ಗಳಿಸಿದರು. ಸೊಪ್ಪಿನ ಅಡುಗೆಗಳ ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ವಿಜ್ಞಾನಿ ಡಾ. ಜಮುನಾ ಅರಸ್, ಪದ್ಮಾ ಮತ್ತು ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಡಾ. ದಿವ್ಯಾ ತೀರ್ಪುಗಾರರಾಗಿದ್ದರು.‌ ಮೇಳ ಸಮಾರೋಪಎರಡು ದಿನಗಳ ಸೊಪ್ಪು ಮೇಳ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಮೊದಲ ಬಾರಿಗೆ ಆಯೋಜಿಸಿದ ಸೊಪ್ಪು ಮೇಳದ ಎರಡನೇ ದಿನವಾದ ಭಾನುವಾರ ಮೈಸೂರಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ತಾವು ಇದುವರೆಗೂ ನೋಡದ ಸೊಪ್ಪುಗಳನ್ನು ಕಂಡು, ಅವುಗಳ ಊಟ ಸವಿದು, ಸೊಪ್ಪುಗಳನ್ನು ಕೊಂಡು ಸಂಭ್ರಮಿಸಿದರು.ಎಚ್.ಡಿ. ಕೋಟೆ, ಕನಕಪುರ, ಕುಂದಗೋಳ ಮತ್ತು ಕೊಳ್ಳೇಗಾಲದಿಂದ ಬಂದ ಸೊಪ್ಪು ಬೆಳೆಗಾರರು ತಾವು ತಂದಿದ್ದ ತರಹೇವಾರಿ ಸೊಪ್ಪು ಖಾಲಿಯಾಯಿತು.