ಸಾರಾಂಶ
ಅಣ್ಣೂರು ಗ್ರಾಮದ ಸಿದ್ದೇಗೌಡರ ಕಬ್ಬಿನ ಗದ್ದೆಯಲ್ಲಿ 2 ಹೆಣ್ಣು ಚಿರತೆ ಮರಿಗಳು ಪ್ರತ್ಯಕ್ಷಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೂಲಿಕಾರ್ಮಿಕರು ಚಿರತೆ ಮರಿಗಳನ್ನು ಕಂಡು ಭಯಭೀತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಅಣ್ಣೂರು ಗ್ರಾಮದ ಸಿದ್ದೇಗೌಡರ ಕಬ್ಬಿನ ಗದ್ದೆಯಲ್ಲಿ 2 ಹೆಣ್ಣು ಚಿರತೆ ಮರಿಗಳು ಪ್ರತ್ಯಕ್ಷಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೂಲಿಕಾರ್ಮಿಕರು ಚಿರತೆ ಮರಿಗಳನ್ನು ಕಂಡು ಭಯಭೀತರಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಯರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯವರು ಚಿರತೆ ಮರಿಗಳನ್ನು ರಕ್ಷಿಸಿ ತಾಯಿ ಚಿರತೆ ಸೆರೆಹಿಡಿಯಲು ಬೋನನ್ನು ಇಟ್ಟಿದ್ದಾರೆ.
ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳನ್ನು ಹಿಡಿದು ಸಾಕು ಪ್ರಾಣಿಗಳಿಗೆ ರಕ್ಷಣೆ ನೀಡಬೇಕಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಚಿರತೆ ದಾಳಿಗೆ ಮೂರು ಮೇಕೆಗಳು ಬಲಿ
ಪಾಂಡವಪುರ:ಚಿರತೆ ದಾಳಿಯಿಂದ ಮೂರು ಮೇಕೆಗಳು ಬಲಿಯಾಗಿರುವ ಘಟನೆ ತಾಲೂಕಿನ ಇಂಗಲಕುಪ್ಪೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮುಂಜಾನೆ 5 ಗಂಟೆ ಸಮಯದಲ್ಲಿ ರೈತ ಕಾಳೇಗೌಡ ಮೇಕೆಗಳನ್ನು ಮನೆ ಮುಂದೆ ಕಟ್ಟಿ ಹಾಕಿದ್ದಾಗ ಚಿರತೆ ದಾಳಿ ನಡೆಸಿ ಮೂರು ಮೇಕೆಗಳನ್ನು ಕೊಂದು ಹಾಕಿದೆ. ಮೇಕೆಗಳ ಕಿರುಚಾಟವನ್ನು ಕಂಡು ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.ಮೇಕೆಗಳನ್ನು ಕಳೆದುಕೊಂಡ ರೈತ ಕಾಳೇಗೌಡರಿಗೆ 50 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಇಂಗಲಕುಪ್ಪೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಹಸು, ಕುರಿ, ಮೇಕೆಗಳ ಮೇಲೆ ಪದೇಪದೇ ದಾಳಿಗಳು ನಡೆಯುತ್ತಿವೆ. ರೈತರು ಜಮೀನುಗಳಿಗೆ ಹೋಗಲು ಭಯ ಪಡುವಂತಾಗಿದೆ. ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಹಾವಳಿ ತಪ್ಪಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇಲಾಖೆಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು, ಜತೆಗೆ ಚಿರತೆಯ ಸೆರೆಗೆ ಬೋನ್ ಹಾಕಲಾಗುವುದು ಎಂದು ಭರವಸೆ ನೀಡಿದರು.