ಸಾರಾಂಶ
2.5 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟಾಗ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಗಳ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕೃಷ್ಣಾನದಿಯ ಒಳಹರಿವು ಹೆಚ್ಚಿದ ಕಾರಣ ಆಲಮಟ್ಟಿ ಜಲಾಶಯದ ಹೊರಹರಿವನ್ನು 1.75 ಲಕ್ಷ ಕ್ಯುಸೆಕ್‌ನಿಂದ 2 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.ಮುಂದಿನ 48 ಗಂಟೆಗಳಲ್ಲಿ ಭಾರಿ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನಿರೀಕ್ಷೆಯಿದೆ. ಮುಂಜಾಗ್ರತೆ ಕ್ರಮವಾಗಿ ಜಲಾಶಯದ ಹೊರಹರಿವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಿದ್ದರಿಂದ ಒಳಹರಿವು ಹೆಚ್ಚುತ್ತಿದೆ. ಇದೇ ರೀತಿ ಮಳೆಯ ಅಬ್ಬರ ಮುಂದುವರಿದರೆ ಹೊರಹರಿವು ಮತ್ತಷ್ಟು ಹೆಚ್ಚಾಗಲಿದೆ.
ಮಹಾರಾಷ್ಟ್ರದ ನವಜಾದಲ್ಲಿ ಮಂಗಳವಾರ 31.6 ಸೆಂ.ಮೀ ದಾಖಲೆ ಮಳೆಯಾಗಿದೆ. ಘಟಪ್ರಭಾ ನದಿಯಿಂದಲೂ 50 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. 2.5 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟಾಗ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಗಳ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಆಲಮಟ್ಟಿ ಜಲಾಶಯಕ್ಕೆ ಸದ್ಯ 1,11,306 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 2 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 519.60ಮೀ ಎತ್ತರದ ಜಲಾಶಯದಲ್ಲಿ 518.92 ಮೀ.ವರೆಗೆ ನೀರು ನಿಂತಿದೆ.ಕೃಷ್ಣಾ ತೀರದ ಗ್ರಾಮಗಳಲ್ಲಿ ಡಂಗೂರ:
ಪ್ರವಾಹಕ್ಕೊಳಗಾಗಬಹುದಾದ ಕೃಷ್ಣಾ ತೀರದ ಗ್ರಾಮಗಳಲ್ಲಿ ನಿಡಗುಂದಿ ತಾಲೂಕು ಆಡಳಿತ ಆಲಮಟ್ಟಿ ಜಲಾಶಯದ ನೀರು ಬಿಟ್ಟ ಬಗ್ಗೆ, ನದಿ ತೀರಕ್ಕೂ ಜನ, ಜಾನುವಾರುಗಳು ತೆರಳದಂತೆ ಡಂಗೂರ ಸಾರಿ ಸೂಚಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಜಲಾಶಯದ ಒಳಹರಿವು ಹೆಚ್ಚಲಿದೆ. ಮುಂಜಾಗ್ರತೆಯ ಕ್ರಮವಾಗಿ 2 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತದೆ. ಒಂದು ವೇಳೆ ಮಳೆಯ ಅಬ್ಬರ ಹೆಚ್ಚಾದರೆ, ಹೊರಹರಿವು ಮತ್ತಷ್ಟು ಹೆಚ್ಚಲಿದೆಂದು ಡಿ.ಬಸವರಾಜ, ಮುಖ್ಯ ಎಂಜಿನಿಯರ್ ತಿಳಿಸಿದರು.