ಸಾಲ ಕೊಟ್ಟ ಮಹಿಳೆಯನ್ನೆ ಬ್ಲಾಕ್ ಮೇಲ್ ಮಾಡಿ 2 ಲಕ್ಷ ವಂಚನೆ

| Published : Dec 03 2023, 01:00 AM IST

ಸಾರಾಂಶ

ಕನಕಪುರ: ಕಷ್ಟಕ್ಕೆ ಸಾಲಕೊಟ್ಟ ಮಹಿಳೆಯನ್ನೆ ಬ್ಲಾಕ್ ಮೇಲ್ ಮಾಡಿ ಹಂತಹಂತವಾಗಿ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಘಟನೆ ತಡವಾಗಿ ಬಳಕಿಗೆ ಬಂದಿದ್ದು ಈ ಸಂಬಂಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕನಕಪುರ: ಕಷ್ಟಕ್ಕೆ ಸಾಲಕೊಟ್ಟ ಮಹಿಳೆಯನ್ನೆ ಬ್ಲಾಕ್ ಮೇಲ್ ಮಾಡಿ ಹಂತಹಂತವಾಗಿ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಘಟನೆ ತಡವಾಗಿ ಬಳಕಿಗೆ ಬಂದಿದ್ದು ಈ ಸಂಬಂಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಸವೇಶ್ವರನಗರದ ಲಕ್ಷ್ಮಮ್ಮ(60)ನಿಗೆ ಒಂದುವರೆ ವರ್ಷದ ಹಿಂದೆ ಪರಿಚಯವಾಗಿದ್ದ ಮೈಸೂರು ಮೂಲದ ಸುನಿಲ್ ಅಕ್ಟೋಬರ್ 5ರಂದು ದೂರವಾಣಿ ಕರೆ ಮಾಡಿ ನಾನು ಬಹಳ ಕಷ್ಟದಲ್ಲಿದ್ದೇನೆಂದು ಹೇಳಿಕೊಂಡು 10 ಸಾವಿರ ಸಾಲ ಪಡೆದಿದ್ದ.

ಇದಾದ ಎರಡೇ ದಿನದಲ್ಲಿ ಯಶವಂತಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹೆಸರಿನಲ್ಲಿ ಲಕ್ಷ್ಮಮ್ಮನಿಗೆ ದೂರವಾಣಿ ಮಾಡಿ, ಸುನಿಲ್ ನಾಲ್ಕು ಜನರಿಗೆ ಚಾಕುವಿನಿಂದ ಹಿರಿದು ತಪ್ಪಿಸಿಕೊಳ್ಳುವಾಗ ನಾವು ಬಂಧಿಸಿದ್ದೇವೆ. ಈ ಕೃತ್ಯ ವ್ಯಸಗಲು ಸುನೀಲನಿಗೆ ನೀವು ಹಣ ಕೊಟ್ಟಿದ್ದೀರಿ ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ನಿಮ್ಮನ್ನು ಬಂಧಿಸಬೇಕಾಗುತ್ತದೆ. ಬಂಧಿಸದೆ ನಿಮಗೆ ಸಹಾಯ ಮಾಡಬೇಕಾದರೆ 27 ಸಾವಿರ ಹಣ ಕೊಡಬೇಕು ಎಂದು ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಹೆದರಿದ ಲಕ್ಷ್ಮಮ್ಮ ನಗರದ ಮಾನಸ ಶಾಲೆಯ ಬಳಿ ನಾಗ ಎಂಬ ವ್ಯಕ್ತಿಗೆ 27 ಸಾವಿರ ಹಣ ಕೊಟ್ಟಿದ್ದಾರೆ.

ಇದೇ ರೀತಿ ಬ್ಲಾಕ್ಮೇಲ್ ಮಾಡಿ ಲಕ್ಷ್ಮಮ್ಮನಿಂದ 63 ಸಾವಿರ ವಸೂಲಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಮಗೆ ಜಾಮೀನು ಕೊಡಿಸಲು ಒಂದು ಲಕ್ಷ ಕೊಡಬೇಕು. ಇಲ್ಲದಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಪ್ಪಾಜಿಗೌಡ ಎಂಬ ವಕೀಲರ ಹೆಸರಿನಲ್ಲಿ ಮತ್ತೆ ದೂರವಾಣಿ ಕರೆ ಮಾಡಿ ಆರೋಪಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ. ಆರೋಪಿಗಳ ಸಂಚಿಗೆ ಹೆದರಿದ ಲಕ್ಷ್ಮಮ್ಮ ತಮ್ಮ ಬಳಿ ಇದ್ದ ವಡವೆಗಳನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಸುನೀಲನಿಗೆ ಒಂದು ಲಕ್ಷ ಹಣ ಕೊಟ್ಟಿದ್ದಾರೆ. ಇದಾದ ಸ್ವಲ್ಪ ದಿನಗಳ ನಂತರ ಮತ್ತೆ ಆರೋಪಿಗಳು 50 ಸಾವಿರ ಹಣ ಕೊಡುವಂತೆ ಬೆದರಿಸಿದ್ದಾರೆ. ಅಸಹಾಯಕ ಮಹಿಳೆ ತಮ್ಮ ಮನೆಯವರಿಗೆ ಘಟನೆ ಬಗ್ಗೆ ತಿಳಿಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.