ಸಾರಾಂಶ
- ದೇವರ ಪೂಜೆ ಮತ್ತು ಲೋಕ ಕಲ್ಯಾಣದೊಡನೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆ
--ಕನ್ನಡಪ್ರಭ ವಾರ್ತೆ ಮೈಸೂರು
ನೂತನ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡು ತಯಾರಿಸಲಾಗುತ್ತಿದೆ.ದೇವರ ಪೂಜೆ ಮತ್ತು ಲೋಕ ಕಲ್ಯಾಣದೊಡನೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ.
ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡು ತಯಾರಿಸುತ್ತಿದ್ದು, ಜ. 1 ರಂದು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಲಾಡು ವಿತರಿಸಲಾಗುತ್ತದೆ. ಅದಕ್ಕಾಗಿ ತಿರುಪತಿ ಮಾದರಿಯ 2 ಲಕ್ಷ ಲಾಡನ್ನು ಸಿದ್ಧಪಡಿಸುತ್ತಿದ್ದು, ಅಂದು ಬೆಳಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಭಕ್ತರಿಗೆ ವಿತರಿಸುವುದಾಗಿ ಅವರು ಬುಧವಾರ ಸುದ್ಧಿಗೋಷ್ಠಿಯಲ್ಲಿ ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂ ಸ್ವಾಮೀಜಿ ಹೇಳಿದರು.ವಿಶ್ವಶಾಂತಿ, ಜಾತೀಯತೆ, ಮತೀಯತೆ ತೊಲಗಿಸಿ ಸಮಾನತೆ, ಸರ್ವಧರ್ಮ ಸಮನ್ವಯತೆ ಆಚರಿಸುವ ಉದ್ದೇಶದೀಇಂದ ಹೊಸ ವರ್ಷಾಚರಣೆ ಮಾಡಲಾಗುತ್ತಿದೆ. ವರ್ಷವನ್ನು ಒಳ್ಳೆಯ ಕಾರ್ಯದ ಮೂಲಕ ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ವಿಶೇಷ ಸಂಕಲ್ಪ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸುವುದಾಗಿ ಅವರು ಹೇಳಿದರು.
ದೇವರಿಗೆ ಅಂದು ವಿಶೇಷ ಅಲಂಕಾರ ಮತ್ತು ಶ್ರೀರಂಗ, ಮಧುರೆ ಕ್ಷೇತ್ರದಿಂದ ತರಿಸಿದ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರ ನಾಮಾರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮೀ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ 20 ಕ್ವಿಂಟಲ್ ಪುಳಿಯೊಗರೆ ನಿವೇದನೆ ಮಾಡಲಾಗುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ವಿತರಿಸುವುದಾಗಿ ಅವರು ವಿವರಿಸಿದರು.ಈ ವರ್ಷ ಅಂದಾಜು 2 ಸಾವಿರ ಗ್ರಾಂ ತೂಕದ ೧೫ ಸಾವಿರ ಲಾಡುಗಳು ಹಾಗೂ 140 ಗ್ರಾಂ ತೂಕದ 2 ಲಕ್ಷ ಲಾಡನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು. ಲಾಡು ಪ್ರಸಾದವನ್ನು ವಿಶೇಷವಾಗಿ 6,040 ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ. ಡಿ. 20 ರಿಂದ ಪ್ರಾರಂಭಿಸಿ 31 ರವರೆಗೂ ಲಾಡು ತಯಾರಿಕೆ ಕಾರ್ಯ ನಡೆಯಲಿದೆ ಎಂದರು.
ಲಾಡು ತಯಾರಿಕೆಗೆ 100 ಕ್ವಿಂಟಲ್ ಕಡ್ಲೆಹಿಟ್ಟು, 200 ಕ್ವಿಂಟಲ್ ಸಕ್ಕರೆ, 10 ಸಾವಿರ ಲೀಟರ್ ಖಾದ್ಯ ತೈಲ, 500 ಕೆ.ಜಿ ಗೋಡಂಬಿ, 500 ಕೆ.ಜಿ ಒಣದ್ರಾಕ್ಷಿ, 500 ಕೆ.ಜಿ ಬಾದಾಮಿ, 1 ಸಾವಿರ ಕೆ.ಜಿ ಡೈಮಂಡ್ ಸಕ್ಕರೆ, 2 ಸಾವಿರ ಕೆ.ಜಿ ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 50 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 50 ಕೆ.ಜಿ, ಪಚ್ಚೆ ಕರ್ಪೂರ, 200 ಕೆ.ಜಿ ಲವಂಗ ಬಳಸಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಮೊದಲಾದವರು ಇದ್ದರು.
---ವರನಟ ಡಾ. ರಾಜಕುಮಾರ್ ದಂಪತಿ ಪ್ರೇರಣೆಯಿಂದ 1994ರಲ್ಲಿ 1 ಸಾವಿರ ಲಾಡು ವಿತರಣೆಯೊಂದಿಗೆ ಆರಂಭವಾದ ಈ ಸೇವೆ ಇಂದು 2 ಲಕ್ಷ ಲಾಡು ವಿತರಣೆಯೊಂದಿಗೆ ನಿರಾತಂಕವಾಗಿ ನಡೆಯುತ್ತಿದೆ.- ಎನ್. ಶ್ರೀನಿವಾಸನ್, ದೇಗುಲದ ಆಡಳಿತಾಧಿಕಾರಿ.