ಸಾರಾಂಶ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಗೆ ಭಾನುವಾರ 70 ಸಾವಿರಕ್ಕೂ ಅಧಿಕ ಪ್ರವಾಸಿಗರು ಬಂದಿದ್ದು, ಹಂಪಿ ಸ್ಮಾರಕಗಳ ವೀಕ್ಷಣೆಗೆ ಮೂರು ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆ.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿಯ ಸಾಲುಮಂಟಪಗಳು, ಎದುರು ಬಸವಣ್ಣ ಮಂಟಪ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ ಮಂಟಪ, ಶ್ರೀಕೃಷ್ಣ ದೇವಾಲಯ, ಕೃಷ್ಣ ಬಜಾರ್, ಉಗ್ರ ನರಸಿಂಹ, ಬಡವಿಲಿಂಗ, ಉದ್ದಾನ ವೀರಭದ್ರೇಶ್ವರ ದೇವಾಲಯ, ನೆಲಸ್ತರದ ಶಿವಾಲಯ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ಹಜಾರ ರಾಮ ದೇವಾಲಯ, ಪಟ್ಟಾಭಿರಾಮ ದೇವಾಲಯ, ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಪುರಂದರ ದಾಸರ ಮಂಟಪ, ಅಚ್ಯುತರಾಯ ದೇವಾಲಯ, ರಾಜರ ತುಲಾಭಾರ, ವರಾಹ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ಹಂಪಿಗೆ ಶುಕ್ರವಾರ 50 ಸಾವಿರ ಪ್ರವಾಸಿಗರು ಆಗಮಿಸಿದ್ದರೆ, ಶನಿವಾರ 80 ಸಾವಿರ ಮತ್ತು ಭಾನುವಾರ 70 ಸಾವಿರ ಪ್ರವಾಸಿಗರು ಬಂದಿದ್ದಾರೆ.ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವುದರಿಂದ, ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಹೊಸಪೇಟೆ, ಗಂಗಾವತಿ, ಕಮಲಾಪುರ ಭಾಗದ ಹೋಟೆಲ್, ರೆಸಾರ್ಟ್‌ಗಳು ಫುಲ್ ಆಗಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಹೋಟೆಲ್‌ಗಳಲ್ಲಿ ರೂಮ್‌ಗಳು ದೊರೆಯುತ್ತಿಲ್ಲ. ಹೊಸಪೇಟೆ, ಕಮಲಾಪುರ, ಗಂಗಾವತಿ ಭಾಗದ ಹೋಟೆಲ್, ರೆಸಾರ್ಟ್‌ಗಳು ಜನವರಿ 3ರ ವರೆಗೆ ಬುಕ್ ಆಗಿದ್ದು, ಎಲ್ಲಿಯೂ ರೂಮ್‌ಗಳು ಸಿಗದಂತಾಗಿದೆ. ಪ್ರವಾಸಿಗರು ಹಂಪಿಗೆ ಹರಿದು ಬರುತ್ತಿರುವುದರಿಂದ ಈ ಭಾಗದಲ್ಲಿ ವ್ಯಾಪಾರ, ವಹಿವಾಟು ಕೂಡ ಜೋರಾಗಿದೆ. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಪ್ರವಾಸಿ ಗೈಡ್‌ಗಳಿಗೂ ಅನುಕೂಲವಾಗಿದೆ. ಇನ್ನು ಹೋಟೆಲ್, ರೆಸಾರ್ಟ್‌ಗಳು ರಶ್ ಆಗುತ್ತಿರುವುದರಿಂದ ಪ್ರವಾಸೋದ್ಯಮದಿಂದ ಉದ್ಯೋಗ ಕೂಡ ಸೃಷ್ಟಿಯಾಗಿದೆ.
ಈ ನಡುವೆ ದೇಶ, ವಿದೇಶಿ ಪ್ರವಾಸಿಗರು ಕೂಡ ಪ್ರವಾಸಿ ಮಾರ್ಗದರ್ಶಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕು. ಜತೆಗೆ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕೂಡ ಒದಗಿಸಬೇಕು. ಈ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಕ್ರಮ ವಹಿಸಬೇಕು ಎಂದು ಪ್ರವಾಸಿಗರು ಕೂಡ ಒತ್ತಾಯಿಸಿದ್ದಾರೆ.ಹಂಪಿಯ ವಿಜಯ ವಿಠಲ ದೇವಾಲಯ ಆವರಣದ ಕಲ್ಲಿನತೇರು ಸ್ಮಾರಕವನ್ನು ಭಾನುವಾರ ವೀಕ್ಷಿಸಿದ ಪ್ರವಾಸಿಗರು.