ಹಾನಗಲ್ಲ ಕ್ಷೇತ್ರದಲ್ಲಿ ೨.೧೩ ಲಕ್ಷ ಮತದಾರರು-ಎಂ.ಎಂ. ರಮೇಶ

| Published : Mar 27 2024, 01:08 AM IST

ಸಾರಾಂಶ

ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ೨,೧೩,೩೩೦ ಮತದಾರರು ಮತದಾನ ಮಾಡಲಿದ್ದು, ೨೪೩ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಂ.ಎಂ. ರಮೇಶ ತಿಳಿಸಿದರು.

ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ೨,೧೩,೩೩೦ ಮತದಾರರು ಮತದಾನ ಮಾಡಲಿದ್ದು, ೨೪೩ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಂ.ಎಂ. ರಮೇಶ ತಿಳಿಸಿದರು.

ತಾಲೂಕಿನಲ್ಲಿ ೧೦೮೯೭೩ ಪುರುಷ ಮತದಾರರಿದ್ದು, ೧೦೪೩೫೧ ಮಹಿಳಾ ಮತದಾರರಿದ್ದಾರೆ. ೬ ಇತರ ಮತದಾರರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೨೨೦ ಮತಗಟ್ಟೆಗಳಿದ್ದು ಹಾನಗಲ್ಲ ಪಟ್ಟಣದಲ್ಲಿ ೨೩ ಮತಗಟ್ಟೆಗಳಿವೆ. ತಾಲೂಕಿನಲ್ಲಿ ೮೩ ಸರ್ವೀ ಮತದಾರರನ್ನು ಗುರುತಿಸಲಾಗಿದ್ದು, ಇವರೆಲ್ಲ ಪುರುಷ ಮತದಾರರೇ ಆಗಿದ್ದಾರೆ. ೩೮೨೪ ವಿಶೇಷಚೇತನ ಮತದಾರರನ್ನು ಗುರುತಿಸಲಾಗಿದೆ. ಮನೆಯಲ್ಲಿಯೇ ಮತದಾನ ಮಾಡಿಸುವ ೩೯೧೧ ಮತದಾರರನ್ನು ಗುರುತಿಸಲಾಗಿದ್ದು, ಇವರನ್ನು ಸಂಪರ್ಕಿಸಿ ಅವರ ಇಚ್ಛೆಯಂತೆ ಮನೆಯಲ್ಲಿಯೇ ಅಥವಾ ಮತದಾನ ಕೇಂದ್ರದಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಹಾನಗಲ್ಲಿನ ಶ್ರೀಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್‌ಸಿಜೆಸಿ ಕಾಲೇಜಿನಲ್ಲಿ ಸ್ಟ್ರಾಂಗ ರೂಂ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಂದಲೇ ಮತಗಟ್ಟೆಗಳಿಗೆ ಅಧಿಕಾರಿಗಳು ಸಿಬ್ಬಂದಿ ತೆರಳಲು ವ್ಯವಸ್ಥೆ ಮಾಡಲಾಗಿದೆ. ತಾಲೂಕು ನೋಡಲ್ ಅಧಿಕಾರಿಗಳಾಗಿ ತಾಪಂ ಇಓ ಎನ್.ವಿ.ಬಾಬು, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ ಕಾರ್ಯನಿರ್ವಹಿಸುವರು. ಕೊಪ್ಪರಸಿಕೊಪ್ಪ, ಗೊಂದಿ, ಸಮ್ಮಸಗಿ, ಹಲ್ಲಿಬೈಲ್ ನಾಲ್ಕು ಕಡೆಗಳಲ್ಲಿ ಚೆಕ್‌ಪೋಸ್ಟಗಳನ್ನು ರಚಿಸಲಾಗಿದೆ. ಇದಕ್ಕೆ ಬೇಕಾಗುವ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹಾನಗಲ್ಲ ಬೊಮ್ಮನಹಳ್ಳಿ ಅಕ್ಕಿಆಲೂರು ಹೋಬಳಿಗಳಿಗೆ ತಲಾ ಒಂದು ಫ್ಲ್ಯೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ.

ಪಕ್ಷಗಳು ಸಭೆ ಸಮಾರಂಭ ನಡೆಸಲು ಅಗತ್ಯ ಪರವಾನಿಗೆ ಪಡೆಯಲು ಸೂಕ್ತ ವಿಳಂಬವಿಲ್ಲದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದು ಈ ಬಾರಿ ಶೇಕಡಾ ನೂರರಷ್ಟು ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಉಳಿದ ಸಿಬ್ಬಂದಿ ನೇಮಕದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸುಗಮ ಚುನಾವಣೆಗಾಗಿ ಬೇಕಾಗುವ ಎಲ್ಲ ಸಿದ್ಧತೆಗೆ ತಾಲೂಕು ಕಚೇರಿ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿ ವರ್ಗ ಸಹಕರಿಸುತ್ತಿದ್ದು ಉತ್ತಮ ರೀತಿಯಲ್ಲಿ ಚುನಾವಣೆ ನಡೆಸುವ ಭರವಸೆ ನೀಡಿದರು. ತಾಲೂಕು ಪಂಚಾಯತ್ ಇಒ ಈ ಸಂದರ್ಭದಲ್ಲಿದ್ದರು.