ಸಾರಾಂಶ
ಹಾವೇರಿ:ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡಿಸಲು 2 ಲಕ್ಷ ರು. ಲಂಚ ಪಡೆಯುತ್ತಿದ್ದ ಪಿಎಸ್ ಐ ಹಾಗೂ ಕಾನ್ ಸ್ಟೇಬಲ್ ಲೊಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಡಸ ಠಾಣೆ ಪಿಎಸ್ಐ ಶರಣಬಸಪ್ಪ ಕಾಂದೆ ಹಾಗೂ ಕಾನ್ ಸ್ಟೇಬಲ್ ಸುರೇಶ ಮಾನೋಜಿ ಲಂಚ ಪಡೆಯಲು ಹೋಗಿ ಲೋಕಾ ಬಲೆಗೆ ಬಿದ್ದವರು.
ಇಸ್ಪೀಟ್ ಆಡಿಸಲು ೫ ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ಮಧ್ಯವರ್ತಿ ಕಿರಣ ವನಹಳ್ಳಿ ಎಂಬುವರ ಮೂಲಕ ಮುಂಗಡವಾಗಿ ಎರಡು ಲಕ್ಷ ರು. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ತಡಸ ಗ್ರಾಮದ ಪ್ರಭಾಕರ ಬೆಟದೂರ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆದಿದೆ. ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ ಹಾಗೂ ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ತಂಡದಲ್ಲಿದ್ದರು.ಆರೋಪಿತರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಹಗಲು ಹೊತ್ತಲ್ಲೇ ಮನೆಗಳ್ಳತನ, ಆಭರಣ ದೋಚಿ ಪರಾರಿಹಾನಗಲ್ಲ: ಒಂದೇ ದಿನ ಹಾನಗಲ್ಲಿನಲ್ಲಿ ಎರಡು ಮನೆಗಳ ಹಗಲು ದರೋಡೆ ನಡೆದಿದ್ದು, ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.ಹಾನಗಲ್ಲಿನ ಕೆಎಚ್‌ಬಿ ಕಾಲನಿ ಹಾಗೂ ಕುಮಾರೇಶ್ವರ ನಗರದಲ್ಲಿ ಗುರುವಾರ ಸಂಜೆ ಮಳೆ ಬೀಳುತ್ತಿರುವಾಗ ಈ ಘಟನೆ ನಡೆದಿದೆ. ಕೆಎಚ್‌ಬಿ ಕಾಲನಿಯ ವೀರೇಶ ಬಾಲಗೊಂಡರ ಅವರ ಮನೆಗೆ ಇಳಿಹೊತ್ತು ೨.೩೦ರಿಂದ ೪ರ ವೇಳೆಯಲ್ಲಿ ಈ ದರೋಡೆ ನಡೆದಿದೆ ಎನ್ನಲಾಗಿದೆ. ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ನುಗ್ಗಿ ಅಲಮೇರಾ ಮುರಿದು ವಿಡಿಯೋ ಕ್ಯಾಮೆರಾ, ಬಂಗಾರ, ಬೆಳ್ಳಿಯ ಆಭರಣಗಳು, ಬೆಳ್ಳಿಯ ನಾಣ್ಯ, ಬಾಂಡೆಗಳು ಹಾಗೂ ₹೫೦ ಸಾವಿರ ನಗದು ಸೇರಿದಂತೆ ಒಟ್ಟು ₹೯.೫೨ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಾನಗಲ್ಲಿನ ಶ್ರೀ ಕುಮಾರೇಶ್ವರ ನಗರದಲ್ಲಿನ ರವೀಂದ್ರ ಶಿರಗೋಡ ಎಂಬುವವರ ಮನೆಯಲ್ಲಿ ಅದೇ ದಿನ ಮುಂಜಾನೆ ೯.೪೫ ರಿಂದ ಸಂಜೆ ೫.೩೦ರ ಅವಧಿಯಲ್ಲಿ ಬಾಗಿಲದ ಲಾಕರ್ ಮುರಿದು, ಅಲ್ಮೇರದ ಬಾಗಿಲನ್ನೂ ಮುರಿದು ಬಂಗಾರ ಬೆಳ್ಳಿಯ ಆಭರಣಗಳು ₹ ೧೬೫೦೦ ನಗದು ಸೇರಿದಂತೆ ಒಟ್ಟು ₹ ೨.೪೮ ಲಕ್ಷಕ್ಕೂ ಅಧಿಕ ಮೊತ್ತದ ವಸ್ತು ಕಳ್ಳತನ ಮಾಡಿದ್ದಾರೆ. ಕೂಡಲೆ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ ಹುಡುಕಾಟ ನಡೆದಿದೆ.