ಸಾರಾಂಶ
ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಹಾಗೂ ಹಕ್ಕಲಪುರ ಗ್ರಾಮದ ಬಳಿ ಪ್ರತ್ಯೇಕವಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಎರಡು ಚಿರತೆಗಳು ಬಂಧಿಯಾಗಿವೆ. ತಾಲೂಕಿನ ಹೊಂಗಹಳ್ಳಿ ಗ್ರಾಮದ ಬಳಿ ಇತ್ತೀಚೆಗೆ ಚಿರತೆ ದಾಳಿ ನಡೆಸಿ ಮೂರು ಹಸುಗಳನ್ನು ಬಲಿ ತೆಗೆದುಕೊಂಡಿತ್ತು. ಅರಣ್ಯ ಇಲಾಖೆ ನಾಗಪ್ಪಗೆ ಸೇರಿದ ಜಮೀನಿನಲ್ಲಿ ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ಕುಮಾರ್ ಬೋನಿ ಇರಿಸಿದ್ದರು. ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಹೋದಾಗ ಬಂಧಿಯಾದರೆ, ಬೇಗೂರು ಹೋಬಳಿಯ ಹಕ್ಕಲಪುರ ಗ್ರಾಮದಲ್ಲೂ ಚಿರತೆಗಳ ಹಾವಳಿ ಹೆಚ್ಚಿತ್ತು. ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಬೋನು ಇಟ್ಟಿದ್ದರು. ಗುರುವಾರ ರಾತ್ರಿ ಹೊಂಗಹಳ್ಳಿ ಹಾಗೂ ಹಕ್ಕಲಪುರದಲ್ಲಿ ಪ್ರತ್ಯೇಕವಾಗಿ ಗಂಡು ಚಿರತೆಗಳು ಬೋನಿಗೆ ಬಿದ್ದಿದೆ ಎಂದು ಎಸಿಎಫ್ ಸುರೇಶ್ ಮಾಹಿತಿ ನೀಡಿದ್ದಾರೆ. ರೈತರು ಹಾಗೂ ಜಾನುವಾರುಗಳಿಗೆ ಕಂಟಕ ಪ್ರಾಯವಾಗಿದ್ದ ಎರಡು ಚಿರತೆಗಳು ಸೆರೆಯಾಗಿರುವುದು ತುಸು ನೆಮ್ಮದಿ ತಂದಿದ್ದು, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಸೂಚನೆ ಮೇರೆಗೆ ಅಭಯಾರಣ್ಯದಲ್ಲಿ ಬಿಡಲು ಕ್ರಮ ವಹಿಸಲಾಗುವುದು ಎಂದರು.