ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ರಾಜಕೀಯ ಪಕ್ಷಗಳು ಯಾತ್ರೆ ನಡೆಸಲು ಸಿದ್ಧವಾಗಿವೆ. ಬಿಜೆಪಿ ಈಗಾಗಲೇ ಒಂದು ಹಂತದ ಯಾತ್ರೆ ನಡೆಸಿದ್ದು, ಮತ್ತೊಂದು ಯಾತ್ರೆಯ ಮುನ್ಸೂಚನೆ ನೀಡಿದೆ. ಈ ನಡುವೆ ಕಾಂಗ್ರೆಸ್‌ನಿಂದಲೂ ಧರ್ಮಸ್ಥಳಕ್ಕೆ ಯಾತ್ರೆ ನಡೆಸಲಿದೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ/ಹುಬ್ಬಳ್ಳಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ರಾಜಕೀಯ ಪಕ್ಷಗಳು ಯಾತ್ರೆ ನಡೆಸಲು ಸಿದ್ಧವಾಗಿವೆ. ಬಿಜೆಪಿ ಈಗಾಗಲೇ ಒಂದು ಹಂತದ ಯಾತ್ರೆ ನಡೆಸಿದ್ದು, ಮತ್ತೊಂದು ಯಾತ್ರೆಯ ಮುನ್ಸೂಚನೆ ನೀಡಿದೆ. ಈ ನಡುವೆ ಕಾಂಗ್ರೆಸ್‌ನಿಂದಲೂ ಧರ್ಮಸ್ಥಳಕ್ಕೆ ಯಾತ್ರೆ ನಡೆಸಲಿದೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಬಿಜೆಪಿ ಈಗಾಗಲೇ ಯಾತ್ರೆ ನಡೆಸಿದೆ. ಅಧಿವೇಶನ ಮುಗಿದ ಬಳಿಕ ನಾನು ಧರ್ಮಸ್ಥಳಕ್ಕೆ ಯಾತ್ರೆಯನ್ನು ಆಯೋಜಿಸುತ್ತೇನೆ ಎಂದು ತಿಳಿಸಿದರು.
ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‍ಪೇಟೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ಅವರು, ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಆ.23ರ ಶನಿವಾರದಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ವತಿಯಿಂದ ಸುಮಾರು 150ಕ್ಕೂ ಹೆಚ್ಚು ಕಾರುಗಳಲ್ಲಿ ನಮ್ಮ ಪಕ್ಷದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದ ಜನತೆಯೊಂದಿಗೆ ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಸೌಜನ್ಯ ಕೊಲೆ ಪ್ರಕರಣದಲ್ಲಿ ಇತ್ತೀಚಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ಪೀಠಕ್ಕೆ ಅಪಪ್ರಚಾರ ಹಾಗೂ ಅಪಕೀರ್ತಿ ತರಲು ಷಡ್ಯಂತ್ರ ನಡೆಯುತ್ತಿರುವ ಪ್ರಯತ್ನಕ್ಕೆ ತಿಲಾಂಜಲಿ ಇಡಬೇಕು, ಧರ್ಮ, ದೇವರ ಮೇಲೆ, ಧರ್ಮಸ್ಥಳದ ಬಗ್ಗೆ ಜನ ಸಾಮಾನ್ಯರು ಇಟ್ಟಿರುವ ಭಕ್ತಿ, ಭಾವನೆಗಳಿಗೆ, ಚ್ಯುತಿ ಬರಬಾರದು ಎಂದರು.
ಧರ್ಮಸ್ಥಳಕ್ಕೆ ಚಲೋ ಮಾಡಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.