2 ಹೊಸ ರೈಲು ಮಾರ್ಗಗಳು ಶೀಘ್ರ ಪೂರ್ಣ

| Published : Aug 31 2025, 01:08 AM IST

ಸಾರಾಂಶ

ರಾಯದುರ್ಗ-ತುಮಕೂರು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಯದುರ್ಗ-ತುಮಕೂರು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಗುಬ್ಬಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಲಘು ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗುಬ್ಬಿ ರೈಲ್ವೆ ನಿಲ್ದಾಣ ಮುಂದಿನ 10 ವರ್ಷಗಳಲ್ಲಿ ಪ್ಲಾಟ್ ಫಾರಂಗಳಿಂದ ಹಿಡಿದು ಎಲ್ಲವೂ ಡಬಲ್ ಆಗುತ್ತದೆ. ಇನ್ನು 4 ವರ್ಷಗಳಲ್ಲಿ ತುಮಕೂರಿನಿಂದ ಬೆಂಗಳೂರಿಗೆ ನಾಲ್ಕು ಪಥ ರೈಲು ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಎಂದರು. ತುಮಕೂರು ಲೋಕಸಭಾ ಕ್ಷೇತ್ರದ ಜನರ ಋಣ ತೀರಿಸಬೇಕಾದ್ದು ನನ್ನ ಕರ್ತವ್ಯ. ನಾನು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋತು ಹೋಗಿದ್ದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುತ್ತೇನೆ ಎಂಬ ನಿರೀಕ್ಷೆಯೂ ಇರಲಿಲ್ಲ. ಆದರೆ ಅನಿರೀಕ್ಷಿತವಾಗಿ ಬಂದ ನನ್ನನ್ನು ಕ್ಷೇತ್ರದ ಜನತೆ ಕೈ ಹಿಡಿದು ಆಶೀರ್ವದಿಸಿದ್ದಾರೆ ಎಂದರು.

ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಆಗ ಮಾತ್ರ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಸಾಧ್ಯ ಎಂದರು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಬೆರೆಸಬಾರದು. ಸಾರ್ವಜನಿಕರ ಕೆಲಸಗಳನ್ನು ಬದ್ಧತೆಯಿಂದ ಮಾಡಿದಾಗ ಮಾತ್ರ ಉತ್ತಮ ರಾಜಕಾರಣಿಯಾಗಲು ಸಾಧ್ಯ. ಸಾರ್ವಜನಿಕ ಜೀವನ ಮುಳ್ಳಿನ ಹಾಸಿಗೆ ಎಂದು ತಿಳಿದುಕೊಂಡಿರುವವರೆಲ್ಲರೂ ಸೇರಿ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದರು. ನಾನು ಬೆಳೆದಿದ್ದು ಸಿದ್ದಗಂಗಾ ಮಠ. ನಾನು ರಾಜಕಾರಣ ಶುರು ಮಾಡಿದ್ದು ಆದಿಚುಂಚನಗಿರಿಯ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದದಿಂದ. ನನಗೆ ಸುಳ್ಳು ಹೇಳಲು ಬರುವುದಿಲ್ಲ. ಹಾಗಾಗಿ ಜನರಿಗೆ ನೀಡಿದ್ದ ಆಶ್ವಾಸನೆ, ಭರವಸೆಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದರು.

ಪ್ರಾಮಾಣಿಕತೆಗೆ ಮತ್ತೊಂದು ಹೆಸರು ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ. ಈ ಎರಡು ಇಲಾಖೆಗಳು ಕೇಂದ್ರ ಸರ್ಕಾರದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಜನರಿಗೆ ತುಂಬಾ ಉಪಯೋಗ ಕಲ್ಪಿಸುವ ಇಲಾಖೆಗಳು ಸಹ ಆಗಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಜನೌಷಧಿ ಅಂಗಡಿಗಳ ರೀತಿಯಲ್ಲೇ ಕೃಷಿ ಇಲಾಖೆಯಲ್ಲೂ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಡಿಮೆ ದರದಲ್ಲಿ ಔಷಧಿ ಕೇಂದ್ರಗಳನ್ನು ಕೊಡುವ ಕೇಂದ್ರಗಳನ್ನು ತೆರೆಯುವ ಸಂಬಂಧ ಪ್ರಧಾನಮಂತ್ರಿಗಳ ಮುಂದೆ ಪ್ರಸ್ತಾಪ ಮಾಡಲಾಗಿದೆ ಎಂದರು.

ಶಾಸಕ ಶ್ರೀನಿವಾಸ್ ರವರು ಸಜ್ಜನ ರಾಜಕಾರಣಿ. ಇರುವುದನ್ನು ಇರುವ ಹಾಗೆಯೇ ಹೇಳುತ್ತಾರೆ. ಚುನಾವಣೆ ಬರುತ್ತದೆ, ಹೋಗುತ್ತದೆ. ಬರುವ ಚುನಾವಣೆಗಳನ್ನು ಪಕ್ಷದ ಚೌಕಟ್ಟಿನಲ್ಲಿ ಎದುರಿಸಬೇಕು ಅಷ್ಟೇ. ಎಲ್ಲದರಲ್ಲೂ ರಾಜಕಾರಣ ಮಾಡಬಾರದು ಎಂದರು. ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಗುಬ್ಬಿ ಪಟ್ಟಣದ ಜನತೆಯ ಬಹುದಿನಗಳ ಕನಸಾಗಿದ್ದ ಲಘು ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೂಲಕ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣನವರು ಈಡೇರಿಸಿದ್ದಾರೆ. ನಮ್ಮ ಜೀವನ ಪರ್ಯಂತ ಸೋಮಣ್ಣನವರನ್ನು ನಾವ್ಯಾರೂ ಮರೆಯುವುದಿಲ್ಲ ಎಂದರು.

ನಾನು 1977-78 ರಲ್ಲಿ 7ನೇ ತರಗತಿಗೆ ಈ ಭಾಗ ಶಾಲೆಗೆ ಸೇರಿದೆ. ಅಂದಿನಿಂದ ಇಂದಿನವರೆಗೆ ಈ ಮೇಲ್ಸೇತುವೆ ನಿರ್ಮಾಣ ಜನರ ಕನಸಾಗಿತ್ತು. ಈ ಕನಸನ್ನು ಸೋಮಣ್ಣನವರು ಭೂಮಿ ಪೂಜೆ ನೆರವೇರಿಸುವ ಮೂಲಕ ಈಡೇರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಭೂಮಿ, ಆಕಾಶ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೆ ಸಿದ್ದಗಂಗಾ ಶ್ರೀಗಳ ಹೆಸರು ಅಜರಾಮರವಾಗಿರುತ್ತದೆ. ಹಾಗೆಯೇ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳ ಕ್ರಾಂತಿ ಮಾಡುತ್ತಿರುವ ಸೋಮಣ್ಣನವರ ಹೆಸರು ಸಹ ಹಚ್ಚ ಹಸಿರಾಗಿ ಉಳಿಯಲಿದೆ ಎಂದರು.

ನನಗೆ ಇಂದು ತುಂಬಾ ಸಂತೋಷವಾಗಿದೆ. ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ರೈಲ್ವೆ ಗೇಟ್ ಇಲ್ಲದಂತೆ ಅಂಡರ್‌ಪಾಸ್‌ಗಳು ನಿರ್ಮಾಣವಾಗುತ್ತಿವೆ. ಇದಕ್ಕೆಲ್ಲಾ ಸೋಮಣ್ಣನವರು ಪಾದರಸದಂತೆ ಕೆಲಸ ಮಾಡುತ್ತಿರುವುದೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ರೈಲ್ವೆ ಇಲಾಖೆಯ ಸಿಇಒಗಳಾದ ರಾಜೇಶ್ ಶರ್ಮ, ಡಿಆರ್‌ಎಂ ಶರ್ಮ, ರಾಷ್ಟ್ರೀಯ ಹೆದ್ದಾರಿ ಮುಖ್ಯಸ್ಥರಾದ ಬ್ರಹ್ಮಾಂಕರ್, ರೈಲ್ವೆ ಮುಖ್ಯ ಇಂಜಿನಿಯರ್ ಪ್ರದೀಪ್ ಪೂರಿ, ಅನೂಪ್ ಶರ್ಮ, ಪ.ಪಂ. ಅಧ್ಯಕ್ಷೆ ಆಯಿಷಾ, ಉಪಾಧ್ಯಕ್ಷೆ ಶ್ವೇತಾ, ದಿಲೀಪ್‌ಕುಮಾರ್, ಹೊನ್ನಗಿರಿಗೌಡ, ಗ್ಯಾಸ್ ಬಾಬು, ಪ್ರಕಾಶ್, ನಾಗರಾಜು, ಯೋಗಾನಂದ್, ವೈ.ಎಚ್. ಹುಚ್ಚಯ್ಯ, ಬ್ಯಾಟರಂಗೇಗೌಡ, ರುದ್ರೇಶ್, ಬೈರಣ್ಣ, ಬೆಟ್ಟಸ್ವಾಮಿ, ಶಿವಪ್ರಸಾದ್, ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.