ಕೈಯಲ್ಲೊಂದು ಮೊಬೈಲ್... ಕಣ್ಣೆದುರಿಗೊಂದು ಮಾಯಾಲೋಕ... ಅದರಲ್ಲೇ ಗಂಟೆಗಟ್ಟಲೆ ಮುಳುಗುತ್ತಿರುವ ಹದಿಹರೆಯದ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ದುಷ್ಪರಿಣಾಮವಾಗಿ ಕೆಲ ಮಕ್ಕಳು ಮಾನಸಿಕ ಒತ್ತಡ ಮತ್ತು ಖಿನ್ನತೆಯಂಥ ಸಮಸ್ಯೆಗಳಿಗೆ ಒಳಗಾಗುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ರಾಘು ಕಾಕರಮಠ

ಅಂಕೋಲಾ: ತಾಲೂಕಿನಲ್ಲಿ ಶೇ. 2ರಷ್ಟು ಹೆಣ್ಣುಮಕ್ಕಳಲ್ಲಿ ಖಿನ್ನತೆ ಇರುವುದು ಅಂಕಿ- ಅಂಶಗಳಿಂದ ಗೊತ್ತಾಗಿದ್ದು, ಅಂಕೋಲಾದ ಸಾಂತ್ವನ ಕೇಂದ್ರ ಹಾಗೂ ಹೊನ್ನಾವರದ ಕೌನ್ಸೆಲಿಂಗ್ ಕೇಂದ್ರಗಳಿಗೆ ಪಾಲಕರು ಮಕ್ಕಳನ್ನು ಕರೆತಂದು ಸಮಾಲೋಚನೆ, ಚಿಕಿತ್ಸೆ ಕೊಡಿಸುತ್ತಿರುವ ಸಹನೀಯ ವಿದ್ಯಮಾನ ಆತಂಕ ಸೃಷ್ಟಿಸಿದೆ. ಮಕ್ಕಳ ಕೌನ್ಸೆಲಿಂಗ್ ವೇಳೆ ಮೊಬೈಲ್ ಬಳಕೆಯಿಂದಲೇ ಖಿನ್ನತೆ, ಮನಸ್ಥಿತಿಯಲ್ಲಿ ಬದಲಾವಣೆ ಇರುವುದು ಕಂಡುಬಂದಿದೆ.

ಕೈಯಲ್ಲೊಂದು ಮೊಬೈಲ್... ಕಣ್ಣೆದುರಿಗೊಂದು ಮಾಯಾಲೋಕ... ಅದರಲ್ಲೇ ಗಂಟೆಗಟ್ಟಲೆ ಮುಳುಗುತ್ತಿರುವ ಹದಿಹರೆಯದ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ದುಷ್ಪರಿಣಾಮವಾಗಿ ಕೆಲ ಮಕ್ಕಳು ಮಾನಸಿಕ ಒತ್ತಡ ಮತ್ತು ಖಿನ್ನತೆಯಂಥ ಸಮಸ್ಯೆಗಳಿಗೆ ಒಳಗಾಗುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮೊಬೈಲ್ ಬಳಕೆಯ ಪರಿಣಾಮವಾಗಿ ಕೆಲವು ಮಕ್ಕಳು ಪಾಲಕರ ಮಾತಿಗೆ ಎದುರಾಡುವುದು, ಮನೆಯಲ್ಲಿ ಜಗಳ ಮಾಡುವುದು, ಶಾಲೆಗೆ ತೆರಳುವುದಾಗಿ ಹೇಳಿ ಬೇರೆಡೆ ಸಮಯ ಕಳೆಯುವುದು ಹಾಗೂ ಶಾಲೆ ಬಿಡುವ ವೇಳೆ ಮಾತ್ರ ಮನೆಗೆ ಮರಳುವಂತಹ ವರ್ತನೆ ತೋರುತ್ತಿದ್ದಾರೆ ಎಂಬುದು ಆಪ್ತ ಸಮಾಲೋಚನೆಯ ವೇಳೆ ತಿಳಿದುಬಂದಿದೆ.

ಇನ್ನು ಗಮನಾರ್ಹ ಸಂಗತಿಯೆಂದರೆ, ಇಂತಹ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚಿರುವುದು. ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವವೂ ಸೇರಿಕೊಂಡಾಗ ಮಕ್ಕಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಸಾಂತ್ವನ ಕೇಂದ್ರಕ್ಕೆ ಬರುತ್ತಿರುವ ಪ್ರಕರಣಗಳಲ್ಲಿ ಸುಮಾರು ಶೇ. 2ರಷ್ಟು ಮಕ್ಕಳು ಅತಿಯಾದ ಮೊಬೈಲ್‌ ಬಳಕೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಸ್ಮಾರ್ಟ್‌ ಫೋನ್‌ಗಳು ಮಕ್ಕಳ ಜ್ಞಾನವರ್ಧನೆ, ಶಿಕ್ಷಣ ಹಾಗೂ ಮನರಂಜನೆಗೆ ಉಪಯುಕ್ತವಾಗಿದ್ದರೂ ಅದರ ಅತಿಯಾದ ಬಳಕೆ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಹದಿಹರೆಯದ ವಯಸ್ಸಿನ ಮಕ್ಕಳು ಮೊಬೈಲ್ ಗೇಮ್, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಆನ್ಲೈನ್ ಚಟುವಟಿಕೆಗಳಿಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.

ಹತೋಟಿಗೆ ಯತ್ನ: ಮೊಬೈಲ್ ಪ್ರಭಾವದಿಂದ ಹದಿಹರೆಯದ ಆಕರ್ಷಣೆಗೆ ಒಳಗಾಗಿ ಖಿನ್ನತೆಗೆ ಹೆಣ್ಣುಮಕ್ಕಳು ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ. ನಾವು ಆದಷ್ಟು ಕೌನ್ಸೆಲಿಂಗ್ ನಡೆಸಿ ಮಕ್ಕಳ ಮನಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳ ಚಲನವಲದದ ಮೇಲೆ ಪಾಲಕರು ತೀವ್ರ ನಿಗಾ ಇಡುವಂತಾಗಬೇಕು ಎಂದು ಅಂಕೋಲಾದ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಮಮತಾ ನಾಯ್ಕ ತಿಳಿಸಿದರು.

ಪಾಲಕರು ನಿಗಾ ವಹಿಸಲಿ: ಮಕ್ಕಳ ಕೈಗೆ ಮೊಬೈಲ್ ನೀಡುವುದರ ಜತೆಗೆ, ಅದರ ಬಳಕೆಯ ಮೇಲೂ ಪಾಲಕರು ನಿಗಾ ವಹಿಸುವ ಅಗತ್ಯವಿದೆ. ಮಕ್ಕಳೊಂದಿಗೆ ಸ್ನೇಹಿತರಂತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸುವುದು, ಮೊಬೈಲ್ ಬಳಕೆಯ ಸಮಯವನ್ನು ಸಮತೋಲನಗೊಳಿಸುವುದು ಹಾಗೂ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಹರಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ.