ಧರ್ಮಸ್ಥಳ ಗ್ರಾಮದ ಪ್ರಕರಣ : ಇಬ್ಬರು ತನಿಖಾಧಿಕಾರಿ ಹೊರಕ್ಕೆ?

| N/A | Published : Jul 24 2025, 12:48 AM IST / Updated: Jul 24 2025, 06:04 AM IST

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ ಪ್ರಕರಣ ಸಂಬಂಧ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೊರಬರುವುದು ಬಹುತೇಕ ಖಚಿತವಾಗಿದೆ.

 ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ ಪ್ರಕರಣ ಸಂಬಂಧ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೊರಬರುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಮತ್ತೊಬ್ಬ ನಾನ್‌ ಐಪಿಎಸ್‌ ಅಧಿಕಾರಿ ಕೂಡ ಈ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈಯಕ್ತಿಕ ಕಾರಣ ನೀಡಿದ ಅಧಿಕಾರಿ ಮನವಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ರಾಜ್ಯ ಪೊಲೀಸ್ ಇಲಾಖೆ, ಈ ಅಧಿಕಾರಿಯನ್ನು ಎಸ್‌ಐಟಿಯಿಂದ ಕೈ ಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗ ಎಸ್‌ಐಟಿಯಿಂದ ಅಧಿಕಾರಿಯನ್ನು ಬಿಡುಗಡೆಗೆ ಸರ್ಕಾರ ತೀರ್ಮಾನಿಸಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಐಪಿಎಸ್ ಅಧಿಕಾರಿಗಳ ಅಸಮ್ಮತಿ ಬೆನ್ನಲ್ಲೇ ಎಸ್‌ಐಟಿಗೆ ಆಯ್ಕೆಯಾದ ನಾನ್‌ ಐಪಿಎಸ್ ಅಧಿಕಾರಿಯೊಬ್ಬರು ಸಹ ಹೊರ ಬರಲು ಮುಂದಾಗಿದ್ದಾರೆ. ಈ ಕುರಿತು ಡಿಜಿ-ಐಜಿಪಿ ಅವರನ್ನು ಗುರುವಾರ ಅಧಿಕಾರಿ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಎಸ್‌ಐಟಿ ರಚನೆಯಾದ ಬಳಿಕ ನಗರದ ಅರಮನೆ ರಸ್ತೆಯ ಸಿಐಡಿ ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಮೊದಲ ಸಭೆ ನಡೆಯಿತು. ಈ ಸಭೆಗೆ ಎಸ್‌ಐಟಿಯಿಂದ ಹೊರಬರಲು ಮುಂದಾಗಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳ ಪೈಕಿ ಒಬ್ಬರು ಹಾಗೂ ನಾನ್‌ ಐಪಿಎಸ್ ಅಧಿಕಾರಿ ಸಹ ಗೈರಾಗಿದ್ದರು. ಈ ಬೆಳವಣಿಗೆ ಹಿನ್ನಲೆಯಲ್ಲಿ ಆ ಇಬ್ಬರು ಅಧಿಕಾರಿಗಳು ಕೂಡ ಹೆಸರು ಕೈ ಬಿಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಎಸ್‌ಪಿ ಮಟ್ಟದ ತನಿಖಾಧಿಕಾರಿ?:

ಪ್ರಕರಣದ ತನಿಖೆಗೆ ಎಸ್ಪಿ ಮಟ್ಟದ ಅಧಿಕಾರಿಯನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಿಸುವ ಬಗ್ಗೆ ಚರ್ಚೆ ನಡೆದಿದೆ. ಕೆಲ ಅಧಿಕಾರಿಗಳ ಗೈರು ಹಾಜರಾತಿ ಹಿನ್ನೆಲೆಯಲ್ಲಿ ಎಸ್ಐಟಿ ಮೊದಲ ಸಭೆಯಲ್ಲಿ ತನಿಖಾಧಿಕಾರಿ ನೇಮಕವಾಗಿಲ್ಲ. ಮತ್ತೆ ಎಸ್‌ಐಟಿ ಸಭೆ ನಡೆಸಿ ತನಿಖಾಧಿಕಾರಿ ಹೆಸರನ್ನು ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ.---

- ತನಿಖೆಗೆ ಹಿಂದೇಟು ಹಾಕಿ ಮತ್ತೊಬ್ಬ ಅಧಿಕಾರಿಯಿಂದ ಇಂದು ಡಿಜಿ-ಐಜಿಪಿ ಭೇಟಿ?

- ತನಿಖೆಯಿಂದ ಹೊರಗುಳಿಯುವ ಕುರಿತು ವಿವರಣೆ ನೀಡಲಿರುವ ಅಧಿಕಾರಿ

--20 ಜನರ ತನಿಖಾ ತಂಡ ರಚನೆಎಸ್‌ಐಟಿಗೆ ಐಪಿಎಸ್ ಅಧಿಕಾರಿಗಳ ನೇಮಕ ಬೆನ್ನಲ್ಲೇ ತನಿಖೆಗೆ ನೆರವಾಗುವ ಕೆಳಹಂತದ 20 ಮಂದಿ ಅಧಿಕಾರಿ -ಸಿಬ್ಬಂದಿಯನ್ನು ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ನಿಯೋಜಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಆರ್‌ಇ ಎಸ್ಪಿ ಸಿ.ಎ.ಸೈಮನ್, ಉಡುಪಿ ಸಿಇಎನ್‌ ಠಾಣೆಯ ಡಿವೈಎಸ್ಪಿ ಎ.ಸಿ.ಲೋಕೇಶ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಇಎನ್‌ ಠಾಣೆ ಡಿವೈಎಸ್ಪಿ ಮಂಜುನಾಥ್ ಸೇರಿ ಇತರೆ ಅಧಿಕಾರಿ - ಸಿಬ್ಬಂದಿಯನ್ನು ಡಿಜಿಪಿ ನೇಮಿಸಿದ್ದಾರೆ.

Read more Articles on