ಬೆಂಗಳೂರಿನ ಬಳಿ 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ 2 ಜಾಗ ಫೈನಲ್‌ : ಸಚಿವ ಎಂ.ಬಿ.ಪಾಟೀಲ್‌

| N/A | Published : Feb 09 2025, 01:17 AM IST / Updated: Feb 09 2025, 07:34 AM IST

ಬೆಂಗಳೂರಿನ ಬಳಿ 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ 2 ಜಾಗ ಫೈನಲ್‌ : ಸಚಿವ ಎಂ.ಬಿ.ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಬಳಿ 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ 2 ಸ್ಥಳ ಗುರುತಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

 ಬೆಂಗಳೂರು : ಬೆಂಗಳೂರು ನಗರ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಜಾಗಗಳನ್ನು ಅಂತಿಮಗೊಳಿಸಲಾಗಿದ್ದು, ಫೆ.17ರೊಳಗೆ ಈ ಕುರಿತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ಈಗಾಗಲೇ ಮಾನದಂಡಗಳ ಆಧಾರದಲ್ಲಿ ನಾಲ್ಕು ಸ್ಥಳಗಳನ್ನು ಗುರುತಿಸಿ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಎರಡು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಯವರಿಗೂ ತಿಳಿಸಲಾಗಿದೆ. ಫೆ.17ರೊಳಗೆ ಈ ಕುರಿತು ಮತ್ತೊಮ್ಮೆ ಸಿಎಂ ಜೊತೆ ಮಾತುಕತೆ ನಡೆಸಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತು ಮಾಡುವ ವಿಚಾರವನ್ನು ಖುದ್ದಾಗಿ ನಾನೇ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ, ಆರ್ಥಿಕತೆ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸ್ಥಳ ನಿಗದಿ ಮಾಡಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ನಿರ್ಧಾರಗಳು ಇರುವುದಿಲ್ಲ. ನಾವು ಸಲ್ಲಿಸುವ ಸ್ಥಳಗಳ ಕುರಿತಂತೆ ಭಾರತ ವಿಮಾನನಿಲ್ದಾಣ ಪ್ರಾಧಿಕಾರದ ತಂಡ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ತಿಳಿಸಲಿದೆ. ಆನಂತರ ವಿಮಾನನಿಲ್ದಾಣದ ಭೂಸ್ವಾಧೀನ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸಲಾಗುವುದು. ಆನಂತರ ಹೂಡಿಕೆದಾರರನ್ನು ಆಹ್ವಾನಿಸಲಾಗುವುದು ಎಂದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ನಂತರದಿಂದ 2033ರವರೆಗೆ ಬೇರೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಬಾರದು ಎಂಬ ಒಪ್ಪಂದವಿದೆ. ಅದು ಇನ್ನೂ 8 ವರ್ಷಗಳಿದ್ದು, ಅಷ್ಟರೊಳಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿ, 2033ರ ನಂತರ ಸೇವೆಗೆ ನೀಡಬೇಕು ಎಂಬುದು ನಮ್ಮ ಗುರಿ. ಅದರಂತೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಜನರಿಗೆ ಕ್ರೆಡಿಟ್‌

2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೊದಲು ಮುಂದಾಗಿದ್ದು ನಾನು ಮತ್ತು ನಮ್ಮ ಸರ್ಕಾರ. ಆದರೆ, ನಾನೇ ಅದರ ಕ್ರೆಡಿಟ್‌ ತೆಗೆದುಕೊಳ್ಳುತ್ತಿಲ್ಲ. ರಾಜ್ಯದ ಜನರು ಅದರ ಕ್ರೆಡಿಟ್ ತೆಗೆದುಕೊಳ್ಳಬೇಕು.

-ಎಂ.ಬಿ.ಪಾಟೀಲ್‌, ಸಚಿವ.