ಎಲ್ಲ ಇಲಾಖೆ ನೌಕರಿಯಲ್ಲೂ ಕ್ರೀಡಾಳುಗಳಿಗೆ 2% ಮೀಸಲು?

| Published : Feb 01 2024, 02:00 AM IST

ಸಾರಾಂಶ

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಅನ್ವಯಿಸುವಂತೆ ರಾಜ್ಯ ಸಿವಿಲ್‌ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಒದಗಿಸಲು ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2024ಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಅನ್ವಯಿಸುವಂತೆ ರಾಜ್ಯ ಸಿವಿಲ್‌ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಒದಗಿಸಲು ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2024ಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ.ಪ್ರಸ್ತುತ ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿನ ನೇಮಕಾತಿಗೆ ಮಾತ್ರ ಕ್ರೀಡಾ ಮೀಸಲಾತಿ ಇದೆ.2021ರಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌, ಸಬ್‌ ಇನ್ಸ್‌ಪೆಕ್ಟರ್‌, ಪೊಲೀಸ್ ಉಪ ಅಧೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಶೇ.2ಕ್ಕಿಂತ ಹೆಚ್ಚಿಲ್ಲದ ಹುದ್ದೆಗಳನ್ನು ಕ್ರೀಡಾ ಮೀಸಲಾತಿಯಡಿ ನೇಮಕ ಮಾಡಿಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಲಾಗಿತ್ತು.ಇದೀಗ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳಿಗೂ ಅನ್ವಯವಾಗುವಂತೆ ಶೇ.2ರಷ್ಟು ಕ್ರೀಡಾ ಮೀಸಲಾತಿ ಜಾರಿಗೆ ತರುವ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ಮುಂದಾಗಿದೆ. ಇದಕ್ಕಾಗಿ ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತರಲಾಗುವುದು. ಈ ಕುರಿತು ತಿದ್ದುಪಡಿ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲೇ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು 2021ರಲ್ಲಿ ಜಾರಿಗೆ ತಂದಿರುವ ಎಂಎಂಆರ್‌ಡಿಎ ತಿದ್ದುಪಡಿ ಕಾಯಿದೆ ಅನ್ವಯ ಕೋಲಾರದ ಕೆಜಿಎಫ್‌ ಚಿನ್ನದ ಗಣಿಯಲ್ಲಿ ಗಣಿ ಚಟುವಟಿಕೆ ಪುನರ್‌ ಆರಂಭ ಮಾಡುವ ಕುರಿತು ಸಹ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.ಭಾರತ್ ಗೋಲ್ಡ್‌ ಮೈನ್ ಲಿಮಿಟೆಡ್‌ (ಬಿಜಿಎಂಎಲ್‌) 2001ರಲ್ಲಿ ಸ್ಥಗಿತಗೊಂಡಿತ್ತು. 2006ರಲ್ಲಿ ಬಿಜಿಎಂಎಲ್‌ ಮಾರಾಟಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿತ್ತಾದರೂ ಹೈಕೋರ್ಟ್‌ ಪುನರ್‌ ಆರಂಭಕ್ಕೆ ಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಇದೀಗ ಕೇಂದ್ರ ಸರ್ಕಾರವು ಕಾಯಿದೆಗೆ ತಿದ್ದುಪಡಿ ಮಾಡಿರುವುದರಿಂದ ಕೆಜಿಎಫ್‌ನಲ್ಲಿ ಶೇಖರಣೆಯಾಗಿರುವ 33 ದಶಲಕ್ಷ ಟನ್‌ನಷ್ಟು ಟೈಲಿಂಗ್‌ ಡಂಪ್ಸ್‌ (ಎಕ್ಸ್ಟ್ರಾಕ್ಷನ್ ವೇಸ್ಟ್) ನಲ್ಲಿ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದರಲ್ಲಿ ಚಿನ್ನ ಮಾತ್ರವಲ್ಲದೆ ಪಲ್ಲಾಡಿಯಂ, ಟಂಗ್‌ಸ್ಟನ್‌ ಸೇರಿದಂತೆ ಸಾವಿರಾರು ಕೋಟಿ ರು. ಮೌಲ್ಯದ ಅದಿರುಗಳು ಇರುವ ಬಗ್ಗೆ ಈಗಾಗಲೇ ಅಧ್ಯಯನ ವರದಿ ಬಂದಿದೆ. ಅದನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಗುರುವಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಎಲ್ಲ ಇಲಾಖೆಯಲ್ಲೂ ನೇಮಕಾತಿ ನಡೆಸುವಾಗ ಉದ್ಯೋಗದಲ್ಲಿ ಕ್ರೀಡಾ ಮೀಸಲಾತಿಯನ್ನು ಶೇ.2ರಷ್ಟು ಮೀಸಲಿಗೆ ಆಗ್ರಹಿಸಿದೆ.