ಸಾರಾಂಶ
ಬಡಗಬೈಲು ಮಂಜಮ್ಮ ತಿಮ್ಮೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ ಯೋಜನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಹಲವಾರು ಶಾಲೆಗಳು ಮುಚ್ಚುವ ಸ್ಥಿತಿ ತಲುಪಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಡಗಬೈಲು (ದ್ವಾರಮಕ್ಕಿ) ಮಂಜಮ್ಮ ತಿಮ್ಮೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೆಳೆಯಲು ಶಾಲೆಗೆ ದಾಖಲಾದ ಪ್ರತಿ ಮಕ್ಕಳ ಹೆಸರಿನಲ್ಲಿ 2 ಸಾವಿರ ರು. ನಿಶ್ಚಿತ ಠೇವಣಿ ಇಡಲು ಶಾಲೆ ನಿರ್ಧರಿಸಿದೆ.
ಬಡಗಬೈಲು ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಯಲ್ಲಿ ಪ್ರಸ್ತುತ ಕೇವಲ 4 ಮಕ್ಕಳಿದ್ದಾರೆ. ಮುಖ್ಯೋಪಾದ್ಯಾಯರು ಸೇರಿ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿನ ಎಸ್‌ಡಿಎಂಸಿ ಗಣೇಶ್ ಹಾಗೂ ಸದಸ್ಯರು, ಗ್ರಾಮಸ್ಥರು, ಶಾಲೆ ಮುಖ್ಯೋಪಾಧ್ಯಾಯ ಆರ್. ನಾಗರಾಜ್, ಸಹ ಶಿಕ್ಷಕಿ ಟಿ.ಕೆ.ಅಮಿತಾ ಸೇರಿ ಸಭೆ ನಡೆಸಿ ಶಾಲೆ ಉಳಿಸಲು ಹಲವು ತೀರ್ಮಾನ ತೆಗೆದುಕೊಂಡಿದ್ದಾರೆ.1 ರಿಂದ 7 ನೇ ತರಗತಿ ಇರುವ ಈ ಶಾಲೆಯಲ್ಲಿ ಕೇವಲ 4 ಮಕ್ಕಳಿರುವುದರಿಂದ 7 ನೇ ತರಗತಿ ಉತ್ತೀರ್ಣರಾದ ಮಕ್ಕಳು ಸಹಜವಾಗಿ ಟಿ.ಸಿ.ತೆಗೆದುಕೊಂಡು ಹೋಗುತ್ತಾರೆ. ಮಕ್ಕಳ ಸಂಖ್ಯೆ ಇನ್ನೂ ಕುಸಿದು ಶಾಲೆ ಮುಚ್ಚುವ ಸ್ಥಿತಿ ಬರುತ್ತದೆ. ಆದ್ದರಿಂದ ಖಾಸಗಿ ಶಾಲೆಗೆ ಹೋಗುತ್ತಿರುವ ಈ ಭಾಗದ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರುವಂತೆ ಮಾಡಲು ಶಾಲೆಗೆ ದಾಖಲಾದ ಪ್ರತಿ ಮಕ್ಕಳ ಹೆಸರಿನಲ್ಲಿ 2 ಸಾವಿರ ನಿಶ್ಚಿತ ಠೇವಣಿ ಇಡಲಾಗುವುದು. ದಾಖಲಾದ ಮಕ್ಕಳನ್ನು ಖಾಸಗಿ ಶಾಲೆಯಂತೆ ವಾಹನದಲ್ಲಿ ಕರೆದುಕೊಂಡು ಬಂದು ಮತ್ತೆ ಮನೆಗೆ ಬಿಡಲಾಗುವುದು.1 ನೇ ತರಗತಿಯಿಂದಲೇ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಲಿಸಲಾಗುವುದು. ನುರಿತ ಹಾಗೂ ಅನುಭವಿ ಶಿಕ್ಷಕರಿಂದ ಪರಿಣಾಮಕಾರಿ ಬೋಧನೆ ಮತ್ತು ಶೈಕ್ಷಣಿಕ ಅಡೆತಡೆಗಳ ಪರಿಹಾರಕ್ಕೆ ಪ್ರತಿ ತಿಂಗಳು ಸಮಾಲೋಚನಾ ಸಭೆ ನಡೆಸಲಾಗುವುದು. ಅಲ್ಲದೆ ಪ್ರಸ್ತುತ ಸರ್ಕಾರಿ ಶಾಲೆಗಳಿಗೆ ಈಗಿರುವ ಬಿಸಿಯೂಟ, ಉಚಿತ ಪಠ್ಯಪುಸ್ತಕ ಮುಂತಾದ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದಾರೆ.
ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದರಿಂದ ಉತ್ತಮ ಶಿಕ್ಷಣ ಸಿಗಬಹುದು ಎಂದು ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೇ ಮಾಯವಾಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ಬಡಗ ಬೈಲು ಸರ್ಕಾರಿ ಶಾಲೆ ಪ್ರಯತ್ನ ಶ್ಲಾಘನೀಯ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡ ಬೇಕಾಗಿದೆ.-- ಕೋಟ್ ---
1945 ರಲ್ಲಿ ಪ್ರಾರಂಭಗೊಂಡ ಬಡಗಬೈಲು ಸರ್ಕಾರಿ ಶಾಲೆ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಈಗ 4 ಮಕ್ಕಳು ಇದ್ದಾರೆ. ಅಮೆರಿಕದಲ್ಲಿ ನೆಲಸಿದ್ದ ವೈದ್ಯ ದಂಪತಿ ಕೃಷ್ಣಮೂರ್ತಿ, ಶಕುಂತಲಾ ತಮ್ಮ ತಂದೆ,ತಾಯಿ ಹೆಸರಿನಲ್ಲಿ ಕಳೆದ 25 ವರ್ಷಗಳ ಹಿಂದೆ ದಾನವಾಗಿ 2 ಕೊಠಡಿ ನಿರ್ಮಾಣ ಮಾಡಿ ಕೊಟ್ಟಿರುವುದರಿಂದ ಈ ಶಾಲೆಗೆ ಮಂಜಮ್ಮ ತಿಮ್ಮೇಗೌಡ ಎಂಬ ಹೆಸರು ಬಂದಿದೆ. ದಾಖಲಾತಿ ಹೆಚ್ಚಿಸಲು ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ ಗ್ರಾಮಸ್ಥರ, ದಾನಿಗಳ ಸಹಾಯದಿಂದ 2 ಸಾವಿರ ರು.ವನ್ನು ರಾಷ್ಟೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವುದು ಸೇರಿದಂತೆ ಹಲವಾರು ಯೋಜನೆ ಪ್ರಾರಂಭಿಸಲು ತೀರ್ಮಾನಿಸಿದ್ದೇವೆ.ಆರ್.ನಾಗರಾಜ್, ಮುಖ್ಯೋಪಾಧ್ಯಾಯರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗ ಬೈಲು, ನರಸಿಂಹರಾಜಪುರ