ಆರಂಬಳ್ಳಿ- ಭದ್ರಾ ಕಾಲೋನಿಯ ರಸ್ತೆಯಲ್ಲೇ ನಿಂತ 2 ಕಾಡಾನೆಗಳು: ವಾಹನ ಸವಾರರಿಗೆ ಆತಂಕ

| Published : Dec 30 2024, 01:04 AM IST

ಆರಂಬಳ್ಳಿ- ಭದ್ರಾ ಕಾಲೋನಿಯ ರಸ್ತೆಯಲ್ಲೇ ನಿಂತ 2 ಕಾಡಾನೆಗಳು: ವಾಹನ ಸವಾರರಿಗೆ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರಂಬಳ್ಳಿ- ಭದ್ರಾ ಕಾಲೋನಿ ರಸ್ತೆಯ ಮಧ್ಯೆ ಭಾನುವಾರ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ 2 ಕಾಡಾನೆಗಳು ನಿಂತುಕೊಂಡಿದ್ದು ವಾಹನ ಸವಾರರಿಗೆ ಆತಂಕ ಮೂಡಿಸಿತು.

ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ । ಮರಳಿ ಆರಂಬಳ್ಳಿ ಅಭಯಾರಣಕ್ಕೆ ಕಾಡಾನೆಗಳು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರಂಬಳ್ಳಿ- ಭದ್ರಾ ಕಾಲೋನಿ ರಸ್ತೆಯ ಮಧ್ಯೆ ಭಾನುವಾರ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ 2 ಕಾಡಾನೆಗಳು ನಿಂತುಕೊಂಡಿದ್ದು ವಾಹನ ಸವಾರರಿಗೆ ಆತಂಕ ಮೂಡಿಸಿತು.

ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡೇ ಇರುವ ಆರಂಬಳ್ಳಿ- ಭದ್ರಾ ಕಾಲೋನಿ ರಸ್ತೆಯ ಮಧ್ಯೆ ಭಾನುವಾರ ಮಧ್ಯಾಹ್ನ 12.30 ರಿಂದ 1 ಗಂಟೆಯವರೆಗೆ ಎರಡು ಕಾಡಾನೆಗಳು ನಿಂತುಕೊಂಡಿದ್ದು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ, ಗ್ರಾಮಸ್ಥರಿಗೆ ಭಯ ಮೂಡಿಸಿತು. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದರು. ಮುತ್ತಿನಕೊಪ್ಪ ಉಪ ವಲಯ ಅರಣ್ಯಾಧಿಕಾರಿ ಮಾರುತಿ .ಎಸ್‌ ಮೌಳಿ , ಅರಣ್ಯ ಸಿಬ್ಬಂದಿ ಹಾಗೂ ಮುತ್ತಿನಕೊಪ್ಪದಲ್ಲಿ ಬೀಡು ಬಿಟ್ಟಿರುವ ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಎರಡು ಕಾಡಾನೆಯನ್ನು ಮರಳಿ ಅರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದ್ದಾರೆ.

ಕಳೆದ 1 ವಾರದಿಂದಲೂ ಆರಂಬಳ್ಳಿ, ಕುಸುಬೂರು, ನೆಲಗದ್ದೆ, ಕಡಹಿನಬೈಲು ಗ್ರಾಮದ ಭೀಮನರಿ, ಚೆನ್ನಮಣಿ,ನೇರ್ಲೆಕೊಪ್ಪದಲ್ಲಿ ಕಾಡಾನೆಗಳು ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ನುಗ್ಗಿ ಅಡಕೆ, ಬಾಳೆ ತಿಂದು ಹಾಕುತ್ತಿವೆ. ಹಗಲು ಹೊತ್ತಿನಲ್ಲಿ ಸಮೀಪದ ಅರಣ್ಯದಲ್ಲಿ ಅಡಗಿ ಕೊಳ್ಳುತ್ತದೆ. ಅರಣ್ಯ ಇಲಾಖೆಯವರು ಮುಂಜಾಗ್ರತೆಯಾಗಿ ಅಲ್ಲಲ್ಲಿ ಎಚ್ಚರಿಕೆಯ ಬ್ಯಾನರ್‌ ಹಾಕಿಸಿದ್ದಾರೆ. ಮೈಕ್ ಮೂಲಕ ಪ್ರಚಾರ ಮಾಡಿ, ರಸ್ತೆಯ ಎರಡು ಬದಿಯಲ್ಲಿ ಅರಣ್ಯ ಇರುವ ಕಡೆ ಅನಗತ್ಯವಾಗಿ ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಲಕ್ಕವಳ್ಳಿ ಭದ್ರಾ ವನ್ಯ ಜೀವಿ ಅರಣ್ಯ ನರಸಿಂಹರಾಜಪುರ ತಾಲೂಕಿನ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡೇ ಇರುವುದರಿಂದ ಕಾಡಾನೆಗಳು ಲಕ್ಕವಳ್ಳಿ ಭದ್ರಾ ವನ್ಯ ಜೀವಿ ಅರಣ್ಯದಿಂದ ನರಸಿಂಹರಾಜಪುರ ತಾಲೂಕಿಗೆ ಬರುತ್ತಿದೆ ಎನ್ನಲಾಗುತ್ತಿದೆ. ಈಗ ಕಾಡಿನ ಅಂಚಿನಲ್ಲಿರುವ ಗ್ರಾಮಸ್ಥರು ಭಯದಿಂದಲೇ ಬದುಕುತ್ತಿದ್ದಾರೆ.