20 ಪ್ರಕರಣ ಭೇದಿಸಿ, 53 ಲಕ್ಷದ ಆಭರಣ ವಶ. ಎಸ್ಪಿ ಬಿ.ಎಸ್.ನೇಮಗೌಡ್ರ

| Published : Apr 03 2024, 01:36 AM IST

20 ಪ್ರಕರಣ ಭೇದಿಸಿ, 53 ಲಕ್ಷದ ಆಭರಣ ವಶ. ಎಸ್ಪಿ ಬಿ.ಎಸ್.ನೇಮಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಿಬ್ಬಂದಿ ಆರೋಪಿಗಳನ್ನು ಬೇಟೆ ಆಡುವುದರ ಜತೆಗೆ ₹ 53 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು ₹ 6 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ವಶ

ಗದಗ: ಜಿಲ್ಲೆಯ 20 ವಿವಿಧ ಠಾಣೆಗಳಲ್ಲಿನ ಕಳ್ಳತನ ಪ್ರಕರಣ ಬೇಧಿಸಿ ₹ 53 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಂಡು ಮರಳಿ ಮಾಲೀಕರಿಗೆ ನೀಡಲಾಗಿದೆ ಎಂದು ಎಸ್ಪಿ ಬಿ.ಎಸ್. ನೇಮಗೌಡ್ರ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಮ್ಮ ಸಿಬ್ಬಂದಿ ಆರೋಪಿಗಳನ್ನು ಬೇಟೆ ಆಡುವುದರ ಜತೆಗೆ ₹ 53 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು ₹ 6 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ವಶಕ್ಕೆ ಪಡೆದಿದ್ದಾರೆ. ಫೆಬ್ರುವರಿಯಲ್ಲಿ ನಡೆದಿದ್ದ ಬಹುತೇಕ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು. ಈ ಪ್ರಕರಣಗಳನ್ನು ಭೇದಿಸುವುದನ್ನು ಇಲಾಖೆ ಸವಾಲಾಗಿ ಸ್ವೀಕರಿಸಿ, ಕಾರ್ಯ ನಿರ್ವಹಿಸಿತ್ತು. ನಿಯಮದಂತೆ ಆಭರಣಗಳನ್ನು ಸ್ವತ್ತಿನ ಮಾಲೀಕರಿಗೆ ವಿತರಿಸಲಾಗುವುದು. ಇತರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಬಂಧಿತ ಆರೋಪಿತರ ಮೇಲೆ ಹತ್ತಾರು ಪ್ರಕರಣ ದಾಖಲಾಗಿವೆ.ಈ ಹಿನ್ನೆಲೆ ಜಾಮೀನು ನೀಡುವ ಪ್ರಕ್ರಿಯೆಯಲ್ಲಿ ಗೊಂದಲ ಏರ್ಪಡದಂತೆ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು. ಪ್ರಕರಣ ಪತ್ತೆ ಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದರು.

ಗದಗ ವಿಭಾಗಕ್ಕೆ ಸಂಬಂಧಿಸಿದಂತೆ ಗದಗ ಗ್ರಾಮೀಣದಲ್ಲಿ ₹ 6 ಪ್ರಕರಣ, ಬೆಟಗೇರಿ ವಿಭಾಗಕ್ಕೆ ಸಂಬಂಧಿಸಿದಂತೆ 3 ಹಾಗೂ ಶಹರ ಠಾಣೆಯಲ್ಲಿ ದಾಖಲಾದ 1 ಪ್ರಕರಣ ಸೇರಿ ಒಟ್ಟು 10 ಪ್ರಕರಣದಲ್ಲಿ 3 ಜನ ಆರೋಪಿತರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 31 ಲಕ್ಷ ಮೌಲ್ಯದ 650 ಗ್ರಾಂ ಚಿನ್ನ, ₹ 4 ಲಕ್ಷ ಮೌಲ್ಯದ 5 ಸಾವಿರ ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ.

ಗಜೇಂದ್ರಗಡ ಠಾಣೆಯ 1 ಪ್ರಕರಣ, ನರೇಗಲ್ ವ್ಯಾಪ್ತಿಯಲ್ಲಿ 2, ಮುಂಡರಗಿ ಠಾಣೆಯಲ್ಲಿ 4 ಹಾಗೂ ನರಗುಂದ ಠಾಣೆಯಲ್ಲಿ ದಾಖಲಾದ 1 ಪ್ರಕರಣ, ಪಕ್ಕದ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡ ಠಾಣೆಯಲ್ಲಿ ದಾಖಲಾದ 1 ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳಿಂದ ₹ 18.75 ಲಕ್ಷ ಮೌಲ್ಯದ 336 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಗದಗನಲ್ಲಿ ನಡೆದಿರುವ ಕಳ್ಳತನಕ್ಕೆ 3 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಅಂಬೇಡ್ಕರ ನಿವಾಸಿ ಅಮರ್ ಚವ್ಹಾಣ (36), ಬಳ್ಳಾರಿ ಜಿಲ್ಲೆ ಕಂಪ್ಲಿಯ ರಾಮು ಶಿಕಾರಿ (30) ಹಾಗೂ ಕಂಪ್ಲಿಯ ರಾಜು ವಡ್ಡರ (32) ಬಂಧಿತ ಆರೋಪಿಗಳು. ಕಳ್ಳತನ ಮಾಡಿದ ಸ್ವತ್ತುಗಳನ್ನು ಪೈನಾನ್ಸಗಳಲ್ಲಿ ಇಟ್ಟು ಸಾಲ ಪಡೆದಿದ್ದಾರೆ. ಕೆಲವರಿಗೆ ಮಾರಾಟ ಮಾಡಲಾಗಿದೆ. ಕಳ್ಳತನಕ್ಕೆ ಬೆಂಬಲಿಸಿದವರಿಗೆ ಕದ್ದ ವಸ್ತುವಿನಲ್ಲಿ ಪಾಲನ್ನು ನೀಡಿರುವುದು ಪತ್ತೆಯಾಗಿದೆ. ನಿಯಮಾನುಸಾರ ಇನ್ನುಳಿದ ಆಭರಣ ವಶಕ್ಕೆ ಪಡೆಯಲಾಗುತ್ತಿದೆ. ನರಗುಂದ ವಿಭಾಗದಲ್ಲಿ ಕಳ್ಳತನ ಮಾಡಿದ 3 ಆರೋಪಿಗಳನ್ನು ಹಾಗೂ ಕಳ್ಳತನದ ವಸ್ತುಗಳನ್ನು ಸ್ವೀಕರಿದ 3 ಆರೋಪಿಗಳನ್ನು ಬಂಧಿಸಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಏರೂರು ಗ್ರಾಮದ ಹನುಮಂತಪ್ಪ ಶೇಖರ್ ಸಿಂಗ್, ಗಂಗಾವತಿಯ ಶಂಕರ ವಾಲ್ಮಿಕಿ, ಸಿಂಧನೂರು ತಾಲೂಕಿನ ತುರುವಿನ ಹಾಳ ಗ್ರಾಮದ ಜಿಲಾನಿ ರಾಜೇಸಾಬ್ ಕಳ್ಳತನ ಮಾಡಿದ ಆರೋಪಿಗಳು. ಸಿಂಧೂನೂರು ತಾಲೂಕಿನ ಮಹಮ್ಮದ ಹುಸೇನ್ ಸುಬಾನಸಾಬ, ಅಬ್ದುಲ್ ರೆಹಮಾನ ಅಬ್ದುಲ್ ಖಾದರ್ ಮತ್ತು ದಾವಲಸಾಬ ಎಂಬುವರು ಕಳುವಿನ ವಸ್ತುಗಳನ್ನು ಸ್ವೀಕರಿಸಿದವರಾಗಿದ್ದಾರೆ. ಇವರಿಂದ 2 ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಎಸ್.ಎಸ್. ಬೀಳಗಿ, ಎಲ್.ಕೆ. ಜೂಲಕಟ್ಟಿ, ಶಿವಾನಂದ ಬನ್ನಿಕೊಪ್ಪ, ಜೆ.ಎಚ್. ಇನಾಂದಾರ ಮುಂತಾದವರು ಹಾಜರಿದ್ದರು.