ದುರ್ಗ ಪ್ರವಾಸಿ ತಾಣ ಅಭಿವೃದ್ದಿಗೆ 20 ಕೋಟಿ ರು. ಕೋರಿಕೆ

| Published : Aug 01 2024, 12:19 AM IST

ದುರ್ಗ ಪ್ರವಾಸಿ ತಾಣ ಅಭಿವೃದ್ದಿಗೆ 20 ಕೋಟಿ ರು. ಕೋರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

destination, request, crore, money

-ಕೇಂದ್ರ ಪ್ರವಾಸೋದ್ಯಮ ಸಚಿವಗೆ ಮನವಿ ಸಲ್ಲಿಸಿದ ಸಂಸದ ಗೋವಿಂದ ಕಾರಜೋಳ

-----

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಚಿತ್ರದುರ್ಗದ ಪ್ರವಾಸಿ ತಾಣಗಳ ಅಭಿವೃಧ್ದಿಗೆ ರು.20 ಕೋಟಿ ಅನುದಾನ ನೀಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಚಿತ್ರದುರ್ಗ ಕಲ್ಲಿನಕೋಟೆ, ಜೋಗಿಮಟ್ಟಿ ಗಿರಿಧಾಮ, ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯ ಮತ್ತು ಚಂದ್ರವಳ್ಳಿ ಗುಹೆಗಳಂತಹ ಪ್ರಮುಖ ಪ್ರವಾಸಿತಾಣಗಳನ್ನು ಹೊಂದಿದೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನೆರವು ಅಗತ್ಯ ಎಂದು ಗೋವಿಂದ ಕಾರಜೋಳ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೋಟೆ ರಾಜಧಾನಿ ಬೆಂಗಳೂರಿನಿಂದ 200 ಕಿಮೀ ಹಾಗೂ ವಿಶ್ವಪಾರಂಪರಿಕಾ ತಾಣ ಹಂಪಿಯಿಂದ 140 ಕಿಮೀ ದೂರದಲ್ಲಿದೆ. ಜೋಗಿಮಟ್ಟಿ ಚಿತ್ರದುರ್ಗ ಜಿಲ್ಲೆಯ ಗಿರಿಧಾಮ ಮತ್ತು ಮೀಸಲು ಅರಣ್ಯ ಪ್ರದೇಶವಾಗಿದೆ. ಬ್ರಿಟೀಷರು ನಿರ್ಮಿಸಿದ ಶತಮಾನದಷ್ಟು ಹಳೆಯದಾದ ಬೆಟ್ಟದ ಬಂಗಲೆಯು ಪ್ರಯಾಣಿಕರಿಗೆ ವಸತಿ ಕಲ್ಪಿಸುತ್ತದೆ. ಜೋಗಿಮಟ್ಟಿ ಸಮೀಪದಲ್ಲಿ ಹಿಮವತ್ಕೇದಾರ ಎನ್ನುವ ಜಲಪಾತವು ನೈಸರ್ಗಿಕ ಗುಹೆಗಳನ್ನು ನಿರ್ಮಾಣ ಮಾಡಿದೆ. ಈ ಗುಹೆಗಳಲ್ಲಿ ಶಿವಲಿಂಗ, ವೀರಭದ್ರ ಮತ್ತು ಬಸವಣ್ಣನ ವಿಗ್ರಹಳನ್ನು ಇಡಲಾಗಿದೆ, ಜೋಗಿಮಟ್ಟಿ ಜಿಲ್ಲೆಯ ಅತಿ ಎತ್ತರದ ಪ್ರದೇಶ ಮತ್ತು ರಾಜ್ಯದ ತಂಪಾದ ಸ್ಥಳಗಳಲ್ಲಿ ಒಂದಾಗಿದೆ. ಕೋಟೆಗೆ ಹೊಂದಿಕೊಂಡಂತೆ ಆಡು ಮಲ್ಲೇಶ್ವರ ಮೃಗಾಲಯವಿದೆ. ಜಿಲ್ಲೆಯ ಇತರೆ ಪ್ರವಾಸಿ ತಾಣಗಳ ಜೊತೆ ಮೃಗಾಲಯವು ಕೂಡ ಪ್ರಾಮುಖ್ಯತೆ ಪಡೆದಿದೆ.

ಚಂದ್ರವಳ್ಳಿ ಪುರಾತತ್ವ ಸ್ಥಳವಾಗಿದೆ. ಈ ಪ್ರದೇಶವು ಚಿತ್ರದುರ್ಗ, ಕಿರುಬನಕಲ್ಲು ಮತ್ತು ಜೋಳಗುಡ್ಡ ಎಂಬ ಮೂರು ಬೆಟ್ಟಗಳಿಂದ ರೂಪುಗೊಂಡ ಕಣಿವೆ ಪ್ರದೇಶ. ಈ ಪ್ರದೇಶವು ಕದಂಬರ ಮೊದಲ ರಾಜಧಾನಿಯಾಗಿತ್ತು ಎನ್ನಲಾಗುತ್ತಿದೆ. ಪ್ರಧಾನಿ ಮೋದಿಜಿಯವರ ಕ್ರಿಯಾತ್ಮಕ ನಾಯಕತ್ವದಡಿಯಲ್ಲಿ ದೇಶದ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಹಾಗೂ ಉತ್ತಮ ಆದಾಯ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಈ ಸ್ಥಳಗಳ ನಡುವೆ ಕೇಬಲ್ ಕಾರ್‌ ಅಳವಡಿಸುವ ಅಗತ್ಯವಿದೆ. ತಿಮ್ಮಣ್ಣ ನಾಯಕನ ಕೆರೆಯಿಂದ ಶ್ರೀರಾಮ ದೇವರ ವಡ್ಡಿನವರೆಗೆ 20 ಎಕರೆ ಜಮೀನಿನಲ್ಲಿ ಮದಕರಿನಾಯಕ ಥೀಮ್‍ಪಾರ್ಕ್ ಸ್ಥಾಪನೆ ಮಾಡಬಹುದಾಗಿದೆ. 150 ವರ್ಷಗಳಷ್ಟು ಹಳೆಯದಾದ ಮಾವಿನ ಆರ್ಕಿಡ್‍ನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮದಕರಿ ನಾಯಕ ಥೀಮ್‍ಪಾರ್ಕ್ ನಿರ್ಮಾಣ ಮಾಡುವ ಮೂಲಕ ಚಿತ್ರದುರ್ಗದ ಜಾನಪದ ವೈಭವ ಮತ್ತು ಬುಡಕಟ್ಟು ಸಂಸ್ಕೃತಿ ಅನಾವರಣ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಪ್ರವಾಸೋಧ್ಯಮ ಇಲಾಖೆಯಿಂದ ರು.20 ಕೋಟಿ ಅನುದಾನ ಮಂಜೂರು ಮಾಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ತಿಳಿಸಿದ್ದಾರೆ.

------------------

ಪೋಟೋ: ಚಿತ್ರದುರ್ಗದ ಪ್ರವಾಸಿತಾಣಗಳ ಅಭಿವೃದ್ಧಿಗೆ ರು.20 ಕೋಟಿ ಅನುದಾನ ನೀಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

------

ಪೋಟೋ: 31 ಸಿಟಿಡಿ 11