ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾನು ಶಾಸಕನಾದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗೆ ₹೨೦ ಕೋಟಿ ಅನುದಾನ ತಂದಿದ್ದೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಹೊರ ವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ₹೫ ಕೋಟಿ ವೆಚ್ಚದ ಅನುದಾನದಲ್ಲಿ ಗುಂಡ್ಲುಪೇಟೆ ಎಪಿಎಂಸಿಗೆ ₹೩.೬ ಕೋಟಿ ಹಾಗೂ ತೆರಕಣಾಂಬಿ ಎಪಿಎಂಸಿ ಉಪ ಪ್ರಾಂಗಣಕ್ಕೆ ₹೧.೫೬ ಕೋಟಿ ಅಭಿವೃದ್ಧಿಗೆ ಭೂಮಿ ಪೂಜೆ ಬಳಿಕ ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೃಷಿ ಉತ್ಪನ್ನ ಸಚಿವರಾಗಿದ್ದ ಶಿವಾನಂದ ಪಾಟೀಲ್‌ಗೆ ನಾನೂ ಇಟ್ಟಿದ್ದ ಬೇಡಿಕೆಯಂತೆ ತಡವಾಗಿಯಾದರೂ ₹೫ ಕೋಟಿ ಅನುದಾನ ಕೊಟ್ಟಿದ್ದಾರೆ ಎಂದರು.ಅಲ್ಲದೆ ಬೇಗೂರು ಹತ್ತಿ ಮಾರುಕಟ್ಟೆಗೆ ₹೬ ಕೋಟಿ, ಕೋಲ್ಡ್ ಸ್ಟೋರೇಜ್‌ಗೆ ₹೯ ಕೋಟಿ ಅನುದಾನ ತಂದಿದ್ದೇನೆ. ಇದೀಗ ₹5 ಕೋಟಿ ಅನುದಾನದಲ್ಲಿ ಗುಂಡ್ಲುಪೇಟೆ ಎಪಿಎಂಸಿ ಹಾಗೂ ತೆರಕಣಾಂಬಿ ಎಪಿಎಂಸಿಯ ಉಪ ಪ್ರಾಂಗಣದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಬಳಕೆ ಆಗಲಿದೆ ಎಂದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬೇಕು ಎಂದು ಎಪಿಎಂಸಿ ಆಡಳಿತ ಮಂಡಳಿ ಬೇಡಿಕೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ವಹಿಸುತ್ತೇನೆ ಎಂದರು.
ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಉಪಾಧ್ಯಕ್ಷ ರಾಜು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಹಾಪ್ ಕಾಮ್ಸ್ ಅಧ್ಯಕ್ಷ ರಾಘವಾಫುರ ನಾಗೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಮಡಿವಾಳಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪುರಸಭೆ ಮಾಜಿ ಉಪಾಧ್ಯಕ್ಷರಾದ ಎಸ್‌ಆರ್‌ಎಸ್ ರಾಜು, ಅಣ್ಣಯ್ಯಸ್ವಾಮಿ, ರಂಗಸ್ವಾಮಿ, ಮುಖಂಡರಾದ ಪುಟ್ಟಸ್ವಾಮಿ ಆಚಾರ್, ಬಿ.ಕುಮಾರಸ್ವಾಮಿ, ಪಿ.ಲಿಂಗರಾಜು, ವೆಂಕಟೇಶ್ ನಾಯಕ, ಎಪಿಎಂಸಿ ಎಲ್ಲಾ ಸದಸ್ಯರು, ಎಪಿಎಂಸಿ ಕಾರ್ಯದರ್ಶಿ ಎಸ್.ಶ್ರೀಧರ್ ಸೇರಿ ಹಲವರಿದ್ದರು.
----ವಿಪಕ್ಷದ ಟೀಕೆಗೆ ಕೆಲಸವೇ ಉತ್ತರ!
ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆಯಾದರೂ ವಿಪಕ್ಷದ ಯಾರೇ ಟೀಕೆ ಮಾಡಿದ್ರೂ ನನ್ನ ಕೆಲಸಗಳೇ ಉತ್ತರ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿಪಕ್ಷಗಳಿಗೆ ಟಾಂಗ್ ನೀಡಿದರು. ಎಪಿಎಂಸಿಯಲ್ಲಿ ಭೂಮಿ ಪೂಜೆ ಬಳಿಕ ಮಾತನಾಡಿ, ವಿಪಕ್ಷದವರ ಟೀಕೆಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅಭಿವೃದ್ಧಿ ಮೂಲಕವೇ ಉತ್ತರ ನೀಡಲು ತಯಾರಿದ್ದೇನೆ ಎಂದು ವಿಪಕ್ಷಗಳ ಹೆಸರೇಳದೆ ವಾಗ್ದಾಳಿ ನಡೆಸಿದರು.