ರಸ್ತೆ ಅಗಲೀಕರಣಕ್ಕೆ ₹20 ಕೋಟಿ ಅನುದಾನ: ಶಾಸಕ ಬಿ.ದೇವೇಂದ್ರಪ್ಪ

| Published : Jun 28 2024, 12:45 AM IST

ಸಾರಾಂಶ

ಜಗಳೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ, ಡಿವೈಎಸ್ಪಿ ಬಸವರಾಜ್, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಸೇರಿ ಸಿಬ್ಬಂದಿ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದರು.

ಕನ್ನಡ ಪ್ರಭ ವಾರ್ತೆ ಜಗಳೂರು

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಅತೀ ಶೀಘ್ರದಲ್ಲೇ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಮಾಡಲಿದ್ದು, ರಸ್ತೆ ಅಗಲೀಕರಣಕ್ಕೆ ಈಗಾಗಲೇ ₹20 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ನಾಗರಿಕರು ಸಹಕರಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಹಾಗೂ ಹೆಲ್ಮೆಟ್‌ ಡಿಸ್ಟ್ರಿಬ್ಯೂಷನ್ ವತಿಯಿಂದ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಿ ಅವರು ಮಾತನಾಡಿ, ಶಾಲಾ-ಕಾಲೇಜು ಬಿಡುವ ವೇಳೆ ಕೆಲವು ಪುಂಡ ಪೋಕರಿ ಹುಡುಗರು ಕರ್ಕಶ ಧ್ವನಿಯೊಂದಿಗೆ ವಿದ್ಯಾರ್ಥಿನಿಯರ ಮುಂದೆ ಜೋರಾಗಿ ವಾಹನ ಚಾಲನೆ ಮಾಡುತ್ತಿರುವ ದೂರುಗಳು ಬಂದಿವೆ. ಅಂಥಹ ಬೈಕ್‌ಗಳನ್ನು ಅಲ್ಲೇ ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ಉದ್ದಗಟ್ಟದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದ ಪಕ್ಕ ವಿಂಡ್ ಪ್ಯಾನ್ ಅಳವಡಿಸಿದ್ದರಿಂದ ಮಕ್ಕಳಿಗೆ ಬಹಳ ತೊಂದರೆಯಾಗುತ್ತದೆ ಎಂಬ ದೂರು ಬಂದಿದೆ. ನನ್ನಅವಧಿಯಲ್ಲಿ ಸರ್ಕಾರಿ ಜಾಗವಿರಲಿ ಎಲ್ಲಿಯೂ ಸಹ ವಿಂಡ್ ಪ್ಯಾನ್ ಹಾಕಲು ಪರ್ಮಿಷನ್ ಕೊಡುವುದಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಶೇ.50ರಷ್ಟು ನಡೆದ ರಸ್ತೆ ಅಪಘಾತದಲ್ಲಿ ಶೇ.37ರಷ್ಟು ಜನ ಹೆಲ್ಮೆಟ್‌ ಧರಿಸದೇ ಇರುವುದರಿಂದ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಧರಿಸಿದರೇ ಪ್ರಾಣ ಉಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಹಾಕಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಗಾಂಜ ಸೇವನೆ ಮಾಡುತ್ತಿರುವ ಸಂಖ್ಯೆ ಅಧಿಕವಾಗುತ್ತಿದ್ದು, ಜಗಳೂರಿನಲ್ಲಿ 14 ಜನರಲ್ಲಿ 5 ಜನರಿಗೆ ಪಾಜಿಟೀವ್ ಬಂದಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಮಾದಕ ವಸ್ತು ಸೇವನೆಯಿಂದ ದೂರವಿರಲು ಮನವರಿಕೆ ಮಾಡಬೇಕು. ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಅಂಥಹ ಸಂದರ್ಭದಲ್ಲಿ ತುರ್ತಾಗಿ 1930 ಕರೆ ಮಾಡಬೇಕು. ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಮದುವೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆಯು ಜಾಗೃತಿ ಮಾಡಲಾಗುವುದು. ಸಾರ್ವಜನಿಕರು ನೀಡಿದ ದೂರುಗಳನ್ನು ಇತ್ಯರ್ಥ ಪಡಿಸಲಾಗುವುದು. ಪೊಲೀಸ್ ಇಲಾಖೆ ಸಾರ್ವಜನಿಕ ಸೇವೆಗೆ ಸದಾ ಸಜ್ಜಾಗಿರುತ್ತೆ ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಮಾತನಾಡಿ, ನೈಸರ್ಗಿಕ ಸಾವಿನ ಸಂಖ್ಯೆಗಿಂತ ಅಪಘಾತದಲ್ಲೇ ಹೆಚ್ಚು ಜನ ಮರಣ ಹೊಂದುತ್ತಿದ್ದಾರೆ. ಸಿಬ್ಬಂದಿಗೆ ಇಂದು ಹೆಲ್ಮೆಟ್ ವಿತರಿಸಲಾಗಿದೆ. ಪೊಲೀಸರೇ ಹೆಲ್ಮೆಟ್ ಧರಿಸಿದರೆ ಸಾರ್ವಜನಿಕರು ಸಹ ಎಚ್ಚೆತ್ತು ಹೆಲ್ಮೆಟ್ ಧರಿಸುತ್ತಾರೆ ಎಂದರು.

ಸಭೆ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ನೇತೃತ್ವದಲ್ಲಿ, ಡಿವೈಎಸ್ಪಿ ಬಸವರಾಜ್, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಸೇರಿ ಸಿಬ್ಬಂದಿ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದರು.

ಡಿವೈಎಸ್ಪಿ ಬಸವರಾಜ್, ಪಿಎಸ್ಐ ಸಾಗರ್, ಮಂಜುನಾಥ್ ಇತರರು ಇದ್ದರು.