ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 105 ವರ್ಷಗಳನ್ನು ಪೂರೈಸಿದೆ. ಶತಮಾನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಈ ವರ್ಷ ವಾರ್ಷಿಕ ಲಾಭದ ಇತಿಹಾಸದಲ್ಲೇ ಎಂದೂ ಮಾಡದಷ್ಟು ನಿವ್ವಳ ಲಾಭ ಮಾಡಿದ್ದು, ವಿಭಜನೆ ಆದ ಬಳಿಕ ₹20.22 ಕೋಟಿ ಲಾಭವನ್ನು ಮೊದಲ ಬಾರಿಗೆ ಮಾಡಿದ್ದೇವೆ ಎಂದು ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ವಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 351 ಬ್ಯಾಂಕ್‌ಗಳಲ್ಲಿ ವಿಡಿಸಿಸಿ ಬ್ಯಾಂಕ್ ಪ್ರತಿವರ್ಷವೂ ಮೊದಲನೇ 25 ಸ್ಥಾನಗಳಲ್ಲಿ ಸ್ಥಾನ ಪಡೆಯುತ್ತಲೇ ಇದೆ. ಇದಕ್ಕೆ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ ಹಾಗೂ ಮಾರ್ಗದರ್ಶಕರಾದ, ಕೊಟ್ರೇಶ ಹಾಗೂ ಎಂ.ಜಿ.ಪಾಟೀಲ್ ಕಾರಣ ಎಂದು ಶ್ಲಾಘಿಸಿದರು.
ಇಷ್ಟೊಂದು ಲಾಭ ಮಾಡಿದ್ದು ಕೃಷಿ ಹಾಗೂ ರೈತರ ಮೇಲಿನ ಸಾಲದಿಂದ ಅಲ್ಲ. ರೈತರಿಗೆ ಶೂನ್ಯಬಡ್ಡಿ ಪ್ರಮಾಣದಲ್ಲಿ ಸಾಲ ಕೊಟ್ಟಿದ್ದು, ಕೃಷಿಯೇತರ ಸಾಲಗಳಲ್ಲಿ ಇಷ್ಟೊಂದು ಲಾಭ ಆಗಿದೆ. ಎನ್‌ಪಿಎ ಪ್ರಮಾಣ ಶೂನ್ಯ ಆಗಿದೆ. ರಾಜ್ಯದಲ್ಲಿ ಸಹಕಾರಿ ಹಾಗೂ ಖಾಸಗಿ ಸೇರಿ 27 ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಡಲಾಗಿದೆ ಎಂದು ವಿವರಿಸಿದರು.ಕಳೆದ 105 ವರ್ಷಗಳಲ್ಲಿ ವಿಡಿಸಿಸಿ ಬ್ಯಾಂಕ್‌ನಿಂದ 46 ಶಾಖೆಗಳನ್ನು ಮಾಡಲಾಗಿದ್ದು, ಇನ್ನೂ ನಾಲ್ಕು ಶಾಖೆ ಮಾಡುವ ಮೂಲಕ ಒಟ್ಟು 50 ಶಾಖೆಗಳನ್ನು ಮಾಡಲಾಗುವುದು. ನಮ್ಮ ಬ್ಯಾಂಕ್ ಆರ್‌ಬಿಐ ನಿಯಂತ್ರಣಕ್ಕೆ ಒಳಪಡುವುದರಿಂದ ನಾವು ಬೇರೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಸ್ಪರ್ಧೆ ಮಾಡಿ ಎಲ್ಲದರಲ್ಲೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲಿದ್ದೇವೆ. ಬ್ಯಾಂಕ್ ವತಿಯಿಂದ ಪ್ರಥಮ ಹಂತದಲ್ಲಿ ರೈತರಿಗೆ ₹25 ಸಾವಿರ ಮಾತ್ರ ಬೆಳೆ ಸಾಲ ಕೊಡುತ್ತಿದ್ದೆವು. ಈ ವರ್ಷದಿಂದ ಪ್ರತಿಯೊಬ್ಬ ರೈತನಿಗೆ ಆರಂಭದಲ್ಲೇ ₹75 ಸಾವಿರ ಬೆಳೆಸಾಲ ಕೊಡುತ್ತಿದ್ದೇವೆ. ಈಗಾಗಲೇ 1.44 ಲಕ್ಷ ರೈತರಿಗೆ ಬೆಳೆಸಾಲ ನೀಡಲಾಗಿದೆ. ಇನ್ನೂ ₹200 ಕೋಟಿ ಹೊಸದಾದ ಹೆಚ್ಚುವರಿ ಸಾಲ ಕೊಡಲು ಪ್ಲಾನ್ ಮಾಡಲಾಗಿದೆ ಎಂದು ಹೇಳಿದರು.
ವಿಡಿಸಿಸಿ ಬ್ಯಾಂಕ್‌ನಿಂದ ಬಹುತೇಕ ಕಡೆ ಇರುವ ಶಾಖೆಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಬಾರಿ 10 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದೀಗ 7 ಕಟ್ಟಡಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಒಟ್ಟು ವೆಚ್ಚ ₹4.50 ಕೋಟಿ ಆಗಲಿದೆ. ನಮ್ಮ ಬ್ಯಾಂಕ್‌ನಿಂದ ₹1700 ಕೋಟಿ ಬೆಳೆಸಾಲ ಕೊಡುತ್ತೇವೆ. ಅಲ್ಲದೆ ಸ್ವಸಹಾಯ ಸಂಘಗಳು, ಕೃಷಿ, ಕೃಷಿಯೇತರ ಸಾಲ ಕೊಡಲಾಗಿದೆ. ₹1 ಲಕ್ಷದವರೆಗೆ ಶೂನ್ಯಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿದೆ. ಕಳೆದ ವರ್ಷ ₹26 ಕೋಟಿ ಸಾಲವನ್ನು ಮಹಿಳೆಯರಿಗೆ ಸ್ವ ಉದ್ಯಮಕ್ಕಾಗಿ ನೀಡಿದ್ದೇವೆ. ಈ ಬಾರಿ ಇನ್ನೂ ಹೆಚ್ಚಿಗೆ ಕೊಡುವ ಉದ್ದೇಶವಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕ ಶೇಖರ ದಳವಾಯಿ, ಬಾಪುಗೌಡ ಪಾಟೀಲ(ಯಾಳಗಿ), ಕಲ್ಲನಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ಚಂದ್ರಶೇಖರ ಪಾಟೀಲ, ಅರವಿಂದ ಪೂಜಾರಿ, ವೃತ್ತಿಪರ ನಿರ್ದೇಶಕ ಎಸ್.ಎಸ್.ಶಿಂಧೆ, ಎಸ್.ಎಸ್.ಜಹಾಗೀರದಾರ, ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಬಿರಾದಾರ, ಡಿಜಿಎಂ ಸುರೇಶ ಪಾಟೀಲ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.------------
ಬಾಕ್ಸ್.....ರೈತರಿಗೆ ₹1699.43 ಕೋಟಿ ಬೆಳೆಸಾಲ
ಜಿಲ್ಲೆಯಲ್ಲಿ ಬ್ಯಾಂಕಿನ ಶಾಖೆಗಳಿಂದ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಒಟ್ಟು 2.43 ಲಕ್ಷ ರೈತರಿಗೆ ₹1699.43 ಕೋಟಿ ಬೆಳೆಸಾಲ ಹಾಗೂ ₹165.10 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಸೇರಿ ಒಟ್ಟು ₹1865.25 ಕೋಟಿ ಸಾಲ ನೀಡಿದ್ದು, ಪ್ರಸಕ್ತ ವರ್ಷದಲ್ಲಿ 18513 ಹೊಸ ರೈತರಿಗೆ ₹145.02 ಕೋಟಿ ಬೆಳೆ ಸಾಲ ವಿತರಿಸಿದೆ. 2023-24 ನೇ ಸಾಲಿನ ಬ್ಯಾಂಕಿನ ಶಾಸನಬದ್ಧ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ''''''''ಅ'''''''' ವರ್ಗದ ಬ್ಯಾಂಕನ್ನಾಗಿ ವರ್ಗೀಕರಿಸಿದೆ. ಇದರೊಂದಿಗೆ ಬ್ಯಾಂಕು ಸತತವಾಗಿ ''''''''ಅ'''''''' ವರ್ಗದ ಬ್ಯಾಂಕಾಗಿ ಮುಂದುವರೆದಿದೆ.-------------ಡಿಸಿಸಿ ಬ್ಯಾಂಕುಗಳ ಅನುಪಾತ ಶೇ.9 ರಷ್ಟು ಇರಬೇಕಿದ್ದು, ಕಳೆದ ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನ ಅನುಪಾತ ಶೇ.12.55 ರಷ್ಟಿದೆ. ಇದು ಬ್ಯಾಂಕಿನ ಸದೃಢತೆಯನ್ನು ಸ್ಫಷ್ಟಪಡಿಸುತ್ತದೆ. ನೀರಾವರಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಅರ್ಹತೆ ಆಧರಿಸಿ ಗರಿಷ್ಠ ₹10 ಲಕ್ಷದವರೆಗೆ ಬೆಳೆ ಸಾಲ ನೀಡುವ ರೈತಮಿತ್ರ ಯೋಜನೆ ಜಾರಿಗೊಳಿಸಿದೆ. ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.13 ರಿಂದ ಶೇ.11ಕ್ಕೆ ಇಳಿಸಿದೆ. ಕಳೆದ ಎರಡು ತಿಂಗಳಿನಿಂದ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇತರೆ ಆನ್‌ಲೈನ್ ವ್ಯವಹಾರ ಸೌಲಭ್ಯಗಳನ್ನು ಆರಂಭಿಸಲಾಗಿದೆ.
- ಶಿವಾನಂದ ಪಾಟೀಲ್, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಚಿವರು