ಹೊಳೆನರಸೀಪುರದಲ್ಲಿ ಜನವರಿಯಿಂದ 20 ಅಗ್ನಿ ಅವಘಡ

| Published : Mar 10 2025, 12:16 AM IST

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ 2025 ಜನವರಿಯಿಂದ 20 ಅಗ್ನಿ ಅವಘಡಗಳು ನಡೆದಿದೆ ಜತೆಗೆ ಅಗ್ನಿಶಾಮಕ ಅಧಿಕಾರಿಗಳು ಸಕಾಲದಲ್ಲಿ ತಲುಪಿ ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ. ತಾಲೂಕಿನಲ್ಲಿ ಬೆಂಕಿ ಅವಘಡಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಇತ್ತೀಚೆಗೆ 500 ಲೀಟರ್ ಸಾಮರ್ಥ್ಯದ ಮತ್ತೊಂದು ಚಿಕ್ಕ ವಾಹನ ತರಿಸಿಕೊಂಡಿದ್ದಾರೆ. ಹೊಳೆನರಸೀಪುರದ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಒಂದು ಅಗ್ನಿಶಾಮಕ ವಾಹನ ಇದ್ದು ಬೇಸಿಗೆಯಲ್ಲಿ ಅಗ್ನಿಅವಗಡಗಳು ಸಂಭವಿಸಿದರೆ ಹೇಗೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮತ್ತೆರೆಡು ವಾಹನದ ಅವಶ್ಯಕತೆ ಇದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ 2025 ಜನವರಿಯಿಂದ 20 ಅಗ್ನಿ ಅವಘಡಗಳು ನಡೆದಿದೆ ಜತೆಗೆ ಅಗ್ನಿಶಾಮಕ ಅಧಿಕಾರಿಗಳು ಸಕಾಲದಲ್ಲಿ ತಲುಪಿ ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ.

ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ 9 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಒಂದು ಲಾರಿ, 4.5 ಸಾವಿರ ಲೀಟರ್ ನೀರು ಸಂಗ್ರಹದ ಲಾರಿ ಇದೆ. ಇದರಲ್ಲಿ 9 ಸಾವಿರ ಲೀಟರ್ ಸಂಗ್ರಹದ ಲಾರಿ 20 ವರ್ಷಕ್ಕಿಂತ ಹಳೆದಾದ ಕಾರಣ ಅದನ್ನು ಬಳಸುತ್ತಿಲ್ಲ. 4.5 ಸಾವಿರ ಲೀಟರ್ ಸಂಗ್ರಹದ ಒಂದೇ ವಾಹನ ಇದ್ದು ಇದಕ್ಕೂ ಜೂನ್‌ಗೆ 15 ವರ್ಷ ಕಳೆಯುತ್ತಿದ್ದು, ಸರ್ಕಾರದ ಆದೇಶದ ಪ್ರಕಾರ ಅದನ್ನೂ ಓಡಿಸುವಂತಿಲ್ಲ. ನಂತರ ಏನು ಏನು ಎನ್ನುವ ಆತಂಕ ಇಲ್ಲಿನ ಅಧಿಕಾರಿಗಳಲ್ಲಿ ಉಂಟು ಮಾಡಿದೆ.

ತಾಲೂಕಿನಲ್ಲಿ ಬೆಂಕಿ ಅವಘಡಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಇತ್ತೀಚೆಗೆ 500 ಲೀಟರ್ ಸಾಮರ್ಥ್ಯದ ಮತ್ತೊಂದು ಚಿಕ್ಕ ವಾಹನ ತರಿಸಿಕೊಂಡಿದ್ದಾರೆ. ಕಳೆದ ವಾರ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಸಾಮಿಲ್ ಒಂದಕ್ಕೆ ಬೆಂಕಿ ಬಿದ್ದಾಗ ಚನ್ನರಾಯಪಟ್ಟಣದಿಂದ 9 ಸಾವಿರ ಲೀಟರ್ ಸಂಗ್ರಹದ ಲಾರಿ ಬಾರದಿದ್ದರೆ, ಭಾರಿ ಅನಾಹುತ ನಡೆದು ಹೋಗುತ್ತಿತ್ತು. ತಾಲೂಕಿನಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ನಮ್ಮೂರಿನ ಅಗ್ನಿಶಾಮಕ ಠಾಣೆಗೆ ತಕ್ಷಣಕ್ಕೆ 9 ಸಾವಿರ ಲೀಟರ್ ಸಾಮರ್ಥ್ಯದ 2 ವಾಹನಗಳ ಅವಶ್ಯಕತೆ ಇದ್ದು, ಕೂಡಲೇ ಲಾರಿಗಳನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ 27 ಹುದ್ದೆಗಳಿದ್ದು, 10 ಹುದ್ದೆ ಖಾಲಿ ಇದೆ. ಮೇಲಿಂದ ಮೇಲೆ ಅಗ್ನಿ ಅವಘಡಗಳು ನಡೆಯುತ್ತಿರುವ ಈ ದಿನದಲ್ಲಿ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ವಾಹನಗಳನ್ನು ಒದಗಿಸಲು ಸೂಚಿಸಬೇಕೆಂದು ಜನರು ಶಾಸಕರು ಹಾಗೂ ಸಂಸದರಲ್ಲಿ ಮನವಿ ಮಾಡಿದ್ದಾರೆ. ಹೊಳೆನರಸೀಪುರದ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಒಂದು ಅಗ್ನಿಶಾಮಕ ವಾಹನ ಇದ್ದು ಬೇಸಿಗೆಯಲ್ಲಿ ಅಗ್ನಿಅವಗಡಗಳು ಸಂಭವಿಸಿದರೆ ಹೇಗೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮತ್ತೆರೆಡು ವಾಹನದ ಅವಶ್ಯಕತೆ ಇದೆ.