ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಡೇಷನ್ ವತಿಯಿಂದ ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ ೧೨ ಪಂಚಾಯಿತಿ ವ್ಯಾಪ್ತಿಯ ೭೭೩ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೨೦ ಲಕ್ಷ ರು. ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಿತು.ಪಡುಬಿದ್ರಿಯ ಬಂಟರ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಬೆಳಗಾವಿ-ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಮತ್ತು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಿಶೋರ್ ಆಳ್ವ ಮಾತನಾಡಿ, ಅದಾನಿ ಯುಪಿಸಿಎಲ್‌ನ ಒಟ್ಟು ಸಿಎಸ್‌ಆರ್ ಅನುದಾನದಲ್ಲಿ ಶೇ.೧೬ರಷ್ಟು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಲಾಗುತ್ತಿದೆ ಎಂದು ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡಲು, ಅವರು ಶಿಕ್ಷಣವನ್ನು ಪೂರ್ಣಗೊಳಿಸಲು ಪ್ರತಿವರ್ಷ ಅದಾನಿ ಫೌಂಡೇಶನ್ ಕಾಪು ತಾಲೂಕಿನ ಸುಮಾರು ೮೦ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಪರಿಕರಗಳನ್ನು ವಿತರಿಸುತ್ತಿದೆ.
ಇದಲ್ಲದೆ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕವನ್ನು ಅದಾನಿ ಸಮೂಹ ಭರಿಸುತ್ತಿದೆ ಮತ್ತು ಅದಾನಿ ಫೌಂಡೇಶನ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತೇಜನೆ ನೀಡುತ್ತಿದೆ ಎಂದು ಹೇಳಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಅತಿಥಿಗಳಾಗಿ ಎಲ್ಲೂರು ಪಂಚಾಯಿತಿ ಅಧ್ಯಕ್ಷ ರವಿರಾಜ್ ರಾವ್, ಬೆಳಪು ಪಂಚಾಯಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ, ಬಡಾ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್, ಬಳ್ಕುಂಜೆ ಪಂಚಾಯಿತಿ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಮಜೂರು ಪಂಚಾಯಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಕುತ್ಯಾರು ಪಂಚಾಯಿತಿ ಅಧ್ಯಕ್ಷ ಜನಾರ್ದನ ಆಚಾರ್ಯ, ಮುದರಂಗಡಿ ಪಂಚಾಯಿತಿ ಅಧ್ಯಕ್ಷೆ ನಮಿತಾ, ಇನ್ನಾ ಪಂಚಾಯಿತಿ ಅಧ್ಯಕ್ಷೆ ಸರೀತಾ ಶೆಟ್ಟಿ, ತೆಂಕ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಪಲಿಮಾರು ಪಂಚಾಯಿತಿ ಉಪಾಧ್ಯಕ್ಷ ರಾಯೇಶ್ವರ ಪೈ ಆಗಮಿಸಿದ್ದರು.
ಯುಪಿಸಿಎಲ್ ಕಂಪನಿಯ ಎಜಿಎಂ ರವಿ ಆರ್. ಜೇರೆ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅದಾನಿ ಫೌಂಡೇಶನ್‌ನ ಸಿಬ್ಬಂದಿ ವರ್ಗದವರಾದ ಅನುದೀಪ್ ಪೂಜಾರಿ, ಶುಭಮಂಗಳ ಎರ್ಮಾಳ್, ಯಶವಂತ್ ಆಂಚನ್ ಮತ್ತಿತರರು ಉಪಸ್ಥಿತರಿದ್ದರು.